
ಮಸ್ಕಿ: ಫೆಬ್ರುವರಿ 1ರಂದು ನಡೆಯಲಿರುವ ಪಟ್ಟಣದ ಮಲ್ಲಿಕಾರ್ಜುನ (ಮಲ್ಲಯ್ಯ) ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಕಲಿ ಭಿತ್ತಿಪತ್ರಗಳನ್ನು ಹಾಗೂ ದೇಣಿಗೆ ರಸೀದಿ ಮುದ್ರಿಸಿ ಭಕ್ತರಿಂದ ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜಾತ್ರಾ ಸಮಿತಿಯಿಂದ ಪ್ರಕಟವಾಗುವ ಮೊದಲೇ ಕೆಲವರು ನಕಲಿ ರಸೀದಿ ಪುಸ್ತಕ ಮುದ್ರಿಸಿಕೊಂಡು ನೆರೆಯ ತಾಲ್ಲೂಕಿಗೆ ತೆರಳಿ ದೇಣಿಗೆ ಕೇಳುತ್ತಿದ್ದಾರೆ. ಈ ನಕಲಿ ಭಿತ್ತಿಪತ್ರಗಳಲ್ಲಿ ಜಾತ್ರೆಯ ದಿನಾಂಕ, ಪೂಜೆ–ಕಾರ್ಯಕ್ರಮಗಳ ವಿವರಗಳನ್ನು ಉಲ್ಲೇಖಿಸಿ ಹಣ ಸಂಗ್ರಹಿಸಲಾಗುತ್ತಿದ್ದು, ಇದಕ್ಕೆ ದೇವಸ್ಥಾನ ಸಮಿತಿಯ ಅನುಮತಿ ಇಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಭಕ್ತರನ್ನು ಮಾತ್ರವಲ್ಲದೆ ದೇವಸ್ಥಾನ ಹಾಗೂ ಜಾತ್ರಾ ಸಮಿತಿಗೂ ನೇರವಾಗಿ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ವಿಷಯ ತಿಳಿದ ದೇವಸ್ಥಾನ ಸಮಿತಿ ಸದಸ್ಯರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಧಿಕೃತ ಭಿತ್ತಿಪತ್ರ ಪ್ರಕಟವಾದ ನಂತರ ಮಾತ್ರ ದೇಣಿಗೆ ನೀಡಬೇಕು. ನಕಲಿ ಬಿತ್ತಿಪತ್ರ ಹಿಡಿದು ದೇಣಿಗೆ ಕೇಳುವವರ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಸಮಿತಿ ಅಥವಾ ಪೊಲೀಸ್ ಇಲಾಖೆಗೆ ತಿಳಿಸಲು ಕೋರಿದ್ದಾರೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಅಮರಪ್ಪ ಗುಡದೂರು ಮಾತನಾಡಿ, ‘ಮಲ್ಲಿಕಾರ್ಜುನ ಜಾತ್ರೆಯ ನಕಲಿ ಭಿತ್ತಿಪತ್ರ ಹಾಗೂ ರಸೀದಿ ನೀಡಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡುತ್ತಿರುವುದು ಕಂಡು ಬಂದಿದೆ. ಯಾರಾದರೂ ಬಂದು ದೇಣಿಗೆ ಕೇಳಿದರೆ ಮೊಬೈಲ‌್ ಸಂಖ್ಯೆ: 6362127441 ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.