
ಸಿಂಧನೂರು: ಬಂಗಾರದ ಆಭರಣ ತಯಾರಿಸಿ ಕೊಡುವುದಾಗಿ ವಿವಿಧ ಬಂಗಾರದ ಆಭರಣಗಳ ಅಂಗಡಿ ಮಾಲೀಕರಿಂದ 454 ಗ್ರಾಂ ಶುದ್ಧ ಬಂಗಾರ ಮತ್ತು ₹ 6.30 ಲಕ್ಷ ನಗದು ಪಡೆದುಕೊಂಡು ಆಭರಣ ತಯಾರಿಸಿ ಕೊಡದೆ ಜನರಿಗೆ ನಂಬಿಕೆ ದ್ರೋಹವೆಸಗಿ ತಲೆಮರೆಸಿಕೊಂಡಿದ್ದ ಎಸ್.ಕೆ.ಸೈಫುಲ್ಲಾ ಎನ್ನುವ ಆರೋಪಿಯನ್ನು ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮತ್ತು ಜಿ.ಹರೀಶ್, ಸಿಂಧನೂರು ಡಿವೈಎಸ್‍ಪಿ ಚಂದ್ರಶೇಖರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ವೀರಾರೆಡ್ಡಿ ಎಚ್ ನೇತೃತ್ವದಲ್ಲಿ ಸಿಬ್ಬಂದಿ ವಿಜಯಕುಮಾರ, ಖಲೀಲ್‍ಪಾಷಾ, ಶರಣಪ್ಪ ರೆಡ್ಡಿ, ಆದಯ್ಯ, ಸಿಡಿಆರ್ ವಿಭಾಗದ ಮಲ್ಲನಗೌಡ ಒಳಗೊಂಡು ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡ ಪ್ರಕರಣದ ಆರೋಪಿಯಾದ ಎಸ್.ಕೆ.ಸೈಫುಲ್ಲಾನನ್ನು ಪಶ್ಚಿಮ ಬಂಗಾಳ ರಾಜ್ಯದ ಹೂಗ್ಲಿ ಜಿಲ್ಲೆಯಲ್ಲಿ ಪತ್ತೆ ಮಾಡಿ ಬಂಧಿಸಿ, ₹ 24.70 ಲಕ್ಷ ಬೆಲೆಬಾಳುವ 190 ಗ್ರಾಂ ಬಂಗಾರವನ್ನು ಜಪ್ತಿ ಮಾಡಿಕೊಂಡಿದೆ. ಆರೋಪಿಯ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.