
ಹಟ್ಟಿ ಚಿನ್ನದ ಗಣಿ: ಈ ಭಾಗದ ಮಾವಿನ ಮರಗಳಲ್ಲಿ ಜನವರಿ ಆರಂಭದಲ್ಲಿಯೇ ಸಾಕಷ್ಟು ಹೂಗಳು ಕಂಡುಬಂದಿರುವುದು ಸಮೃದ್ಧ ಫಸಲಿನ ಮುನ್ಸೂಚನೆ ನೀಡಿದೆ.
ಮಾವಿನ ಮರಗಳು ಸಮೃದ್ದವಾಗಿ ಹೂ ಕಟ್ಟಿವೆ. ಬೆಳೆಗೆ ಪೂರಕವಾದ ವಾತಾವರಣ ಇದ್ದು, ಬೆಳೆಗಾರರು ಈ ಭಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಈ ಭಾಗದಲ್ಲಿ ರಸಪೂರಿ, ಆಪೂಸಾ, ತೋತಾಪುರಿ, ಮಲಗೋವಾ ಮತ್ತು ಇತರ ತಳಿಯ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಗುರುಗುಂಟಾ ಹೋಬಳಿ ವ್ಯಾಪ್ತಿಯ 35 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಚಳಿ ಹೀಗೆಯೇ ಬೀಳುತ್ತಿದ್ದರೆ ಮಾವು ಸಮೃದ್ಧವಾಗಿ ಬರುತ್ತದೆ ಎನ್ನುತ್ತಾರೆ ಮಾವು ಬೆಳೆಗಾರರು.
‘ಹೆಚ್ಚಿನ ಹೂವುಗಳಿಂದ ಮರಗಳು ನಳ ನಳಿಸುತ್ತಿವೆ. ಕೆಲವು ಮರಗಳಲ್ಲಿ ಜಿಗಿಹುಳು ಕಾಟ ಹೆಚ್ಚಾಗಿದ್ದು, ಹತೋಟಿಗೆ ತರಲು ಪರದಾಡುತ್ತಿದ್ದೇವೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಗಮನಹರಿಸುವಲ್ಲಿ ವಿಫಲರಾಗಿದ್ದಾರೆ’ ಎನ್ನುತ್ತಾರೆ ರೈತರು.
‘ಮಾವು ಬೆಳೆಗಾರರು ಹೂವು ರಕ್ಷಣೆಗೆ ಕ್ರಮ ವಹಿಸಬೇಕು. ಪರಾಗಸ್ಪರ್ಶ ಸಮಯದಲ್ಲಿ ಔಷಧ ಸಿಂಪಡಣೆ ಮಾಡಬಾರದು. ಬೆಳಿಗ್ಗೆ 10ರ ಒಳಗೆ ಸಿಂಪಡಣೆ ಮಾಡಬೇಕು. ಜಿಗಿಹುಳು ಬಿದ್ದರೆ, ಶಿಲೀಂಧ್ರನಾಶಕ ಔಷಧ ಸಿಂಪಡಣೆ ಮಾಡಬೇಕು. ಹೂವು ಬಿಡುವ ಮರಗಳಿಗೆ ನೀರು ಹರಿಸಬಾರದು’ ಎಂದು ತೊಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಾರೆ.
‘ಕಳೆದ ವರ್ಷವೂ ಹೂವಿನ ಪ್ರಮಾಣ ಹೆಚ್ಚಾಗಿತ್ತು. ಅತಿಯಾದ ಇಬ್ಬನಿ, ಮೋಡ ಕವಿದ ವಾತಾವರಣದಿಂದ ಬೂದಿರೋಗ ತಗುಲಿ ನಿರೀಕ್ಷೆ ಕಮರಿತ್ತು. ಈ ವರ್ಷ ಭರಪೂರ ಹೂವು ಅರಳಿದ್ದು, ಹೆಚ್ಚಿನ ಇಳುವರಿಯ ನಿರೀಕ್ಷೆ ಇದೆ’ ಎನ್ನುತ್ತಾರೆ ರೈತ ಅಂಬಣ್ಣ.
ಈ ಭಾರಿ ಉತ್ತಮ ಮಳೆ–ಹವೆಯಿಂದ ಶೇ 90ಕ್ಕೂ ಹೆಚ್ಚು ಮಾವಿನ ಮರಗಳು ಹೂ ಕಟ್ಟಿವೆ. ಈವರೆಗೆ ಯಾವುದೇ ರೋಗ ಕಂಡುಬಂದಿಲ್ಲ. ವಾತಾವರಣ ಹೀಗೆಯೇ ಇದ್ದರೆ ಉತ್ತಮ ಇಳುವರಿ ಲಭಿಸುವ ನಿರೀಕ್ಷೆ ಇದೆ–ಶ್ರೀಶೈಲ್ ವಾಗ್ಮೋರೆ, ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಲಿಂಗಸುಗೂರು
ಈ ಭಾರಿ ಹೆಚ್ವಿನ ಲಾಭದ ನಿರೀಕ್ಷೆ ಇದೆ. ಆದರೆ ಮಾವಿನ ಹೂಗಳು ಉದುರಿದರೆ ರೈತರಿಗೆ ಮತ್ತೆ ನಷ್ಟವಾಗಲಿದೆ. ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ–ಶಿವರಾಜಗೌಡ ಗುರಿಕಾರ, ರೈತ ಸಂಘ ಹಸಿರು ಸೇನೆ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.