ಲಿಂಗಸುಗೂರು ತಾಲ್ಲೂಕಿನ ಯರಡೋಣಾ ಸರ್ಕಾರಿ ಪ್ರೌಢಶಾಲೆ ಹೊರನೋಟ
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಯರಡೋಣಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸುತ್ತಲಿನ ಗ್ರಾಮಗಳಷ್ಟೇ ಅಲ್ಲ, ಲಿಂಗಸುಗೂರು, ಹಟ್ಟಿ ಪಟ್ಟಣದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಾಲೆಯಾಗಿದೆ.
ಯರಡೋಣಿ ಗ್ರಾಮಕ್ಕೆ 2007ರಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿತ್ತು. ಆದರೆ 2008ರವರೆಗೂ ತಾತ್ಕಾಲಿಕವಾಗಿ ಪ್ರಾಥಮಿಕ ಶಾಲೆಯನ್ನು ಚೌಡೇಶ್ವರಿ ದೇವಸ್ಥಾನದಲ್ಲಿ ಹಾಗೂ ಪ್ರೌಢಶಾಲೆಯನ್ನು ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆಸಲಾಗುತ್ತಿತ್ತು.
2010ರಲ್ಲಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾದ ಎಂ.ಮಂಜುಳಾ ಅವರು ಶಾಲೆಗೆ ಸ್ವಂತ ಕಟ್ಟಡವೂ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿಲ್ಲ. ಸಮಸ್ಯೆಗಳೇ ಸವಾಲಾಗಿದ್ದವು. ಅವುಗಳನ್ನು ಸವಾಲಾಗಿಯೇ ಸ್ವೀಕರಿಸಿದ ಶಿಕ್ಷಕಿ, ಗ್ರಾಮದ ಹಿರಿಯ ಚೆನ್ನನಗೌಡ ಪೊಲೀಸಪಾಟೀಲ ಅವರನ್ನು ಮನವೂಲಿಸಿ ಗ್ರಾಮದ ಕಲುಬುರಗಿ ರಸ್ತೆಗೆ ಹೊಂದಿರುವ ಭೂಮಿಯನ್ನು ದಾನವಾಗಿ ಪಡೆದು, ಶಾಲಾ ಕಟ್ಟಡಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ದುಂಬಾಲು ಬಿದ್ದು, ಅನುದಾನ ಬಿಡುಗಡೆಗೊಳಿಸಿ, ಪ್ರೌಢಶಾಲೆಗೆ ಸ್ವಂತ ಕಟ್ಟಡ, ಬಿಸಿಯೂಟ ಕೊಠಡಿ, ಶೌಚಾಲಯ, ಕಾಂಪೌಂಡ್, ಕುಡಿಯುವ ನೀರು, ಹೀಗೇ ಹಂತ ಹಂತವಾಗಿ ಶಾಲೆಗಳಿಗೆ ಸೌಲಭ್ಯ ಒದಗಿಸಲಾಗಿದೆ. 15 ವರ್ಷಗಳಲ್ಲಿ ಶಾಲೆಗೆ ಬೇಕಾಗುವ ಎಲ್ಲ ಮೂಲಸೌಕರ್ಯಗಳನ್ನು ದಾನಿಗಳ ಸಹಕಾರದಿಂದ ಪಡೆದುಕೊಂಡಿದ್ದಾರೆ. ಶಾಲೆಯ ಸೌಂದರ್ಯೀಕರಣ ಇತ್ಯಾದಿ ಅನೇಕ ಕೆಲಸಗಳ ಮೂಲಕ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆ ಆಕರ್ಷಣೆ: ಆರಂಭದಲ್ಲಿ 3 ತರಗತಿ ಸೇರಿ ಕೇವಲ 78 ವಿದ್ಯಾರ್ಥಿಗಳಿದ್ದರು. ಯರಡೋಣಾ ಸುತ್ತಮುತ್ತ ಇರುವ ದೊಡ್ಡಿ, ತಾಂಡಗಳು, ದೇವರಭೂಪುರ, ಹೊನ್ನಹಳ್ಳಿ ಗ್ರಾಮಗಳಿಗೆ ಸ್ವತಃ ಮುಖ್ಯಶಿಕ್ಷಕಿ ಮಂಜುಳಾ ಭೇಟಿ ನೀಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಮತ್ತು ಅವರ ಪಾಲಕರಿಗೆ ಅರಿವು ಮೂಡಿಸಿ, ಶಾಲೆಗೆ ಬರುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ, ಉತ್ತಮ ಪರಿಸರ, ಶಿಕ್ಷಣದ ಬೆಳವಣಿಗೆ ಸಹಕಾರ ನೀಡಿದ್ದರಿಂದ, ಮೂರು ತರಗತಿಗಳಲ್ಲಿ ಒಟ್ಟು 384 ವಿದ್ಯಾರ್ಥಿಗಳಿದ್ದಾರೆ. ಲಿಂಗಸುಗೂರು ಪಟ್ಟಣದಿಂದ 30 ಹಾಗೂ ಹಟ್ಟಿಯಿಂದಲೂ ಶಾಲೆಗೆ ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಶಿಕ್ಷಕಿ, ಶಿಕ್ಷಣ ಇಲಾಖೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.
ಹೆಚ್ಚುವರಿ 10 ಕೊಠಡಿಗೆ ಪ್ರಸ್ತಾವ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಈಗಿರುವ ಶಾಲಾ ಕೊಠಡಿಗಳು ಸಾಕಾಗುವುದಿಲ್ಲ. ತರಗತಿ ಕೊಠಡಿ ಹಾಗೂ ವಿವಿಧ ಕೊಠಡಿಗಳ ಸೇರಿ ಹೆಚ್ಚುವರಿ 10 ಕೊಠಡಿಗಳ ನಿರ್ಮಾಣಕ್ಕೆ ಬಿಇಒ ಕಾರ್ಯಲಯಕ್ಕೆ ಹಾಗೂ ಶಾಸಕರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಅದು ಕೂಡ ಮಂಜೂರು ಹಂತದಲ್ಲಿದೆ.
2023ರಲ್ಲಿ ಶಾಲೆ ಉತ್ತಮ ಚಟುವಟಿಕೆ ಹಾಗೂ ಮುಖ್ಯ ಶಿಕ್ಷಕ ಕಾರ್ಯವೈಖರಿ ಗುರುತಿಸಿದ ಜಿ.ಪಂ ಸಿಇಒ ಅವರು ಉತ್ತಮ ಶಾಲೆ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ, ₹ 2000 ಪ್ರೋತ್ಸಾಹ ಧನ ನೀಡಿದ್ದರು. 2023ರಲ್ಲಿ ಎಚ್.ಜಿ. ಗೋವಿಂದೇಗೌಡ ಉತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕೊನೆ ಕ್ಷಣದಲ್ಲಿ ಪ್ರಶಸ್ತಿ ಕೈತಪ್ಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.