ADVERTISEMENT

ಮಾನ್ವಿ: ಕುಡಿಯುವ‌ ನೀರಿಗಾಗಿ ತಪ್ಪದ ಬವಣೆ

ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪುರಸಭೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 8:28 IST
Last Updated 9 ಮೇ 2025, 8:28 IST
ಮಾನ್ವಿ ಪಟ್ಡಣದ ಮಲ್ಲಿಕಾರ್ಜುನ ಬೆಟ್ಟದ ಸಮೀಪದ ಕೆರೆಯ ವರತಿ ನೀರು ಹೊತ್ತು ತರುತ್ತಿರುವ ಮಹಿಳೆ
ಮಾನ್ವಿ ಪಟ್ಡಣದ ಮಲ್ಲಿಕಾರ್ಜುನ ಬೆಟ್ಟದ ಸಮೀಪದ ಕೆರೆಯ ವರತಿ ನೀರು ಹೊತ್ತು ತರುತ್ತಿರುವ ಮಹಿಳೆ   

ಮಾನ್ವಿ: ಪಟ್ಟಣದಲ್ಲಿ ಪುರಸಭೆಯ ವತಿಯಿಂದ ಅಸಮರ್ಪಕವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

ರಬ್ಬಣಕಲ್ ಸಮೀಪದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕೆರೆ ಹಾಗೂ ಕಾತರಕಿ ಜಾಕ್‌ವೆಲ್ ಮೂಲಕ ಪಟ್ಟಣಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸುತ್ತಿರುವುದಾಗಿ ಪುರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ವಾಸ್ತವವಾಗಿ ಕೆಲವು ವಾರ್ಡ್‌ಗಳಿಗೆ 6-8ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ಅನೇಕ ಕಡೆ ಕುಡಿಯುವ ನೀರು ಪೈಪ್ ಒಡೆದು ನೀರು ಪೋಲಾಗುವುದು ಹಾಗೂ ನಿರಂತರ ವಿದ್ಯುತ್ ಸಮಸ್ಯೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಅಡ್ಡಿಯಾಗಿವೆ.

ಜನ ಶುದ್ಧ ಕುಡಿಯುವ ನೀರಿಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಅವಲಂಬಿಸುವಂತಾಗಿದೆ. ಬೇಸಿಗೆ ಆರಂಭಕ್ಕೆ ಮುನ್ನ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಹೊಸದಾಗಿ 16 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದರೂ ನೀರಿನ ಸಮಸ್ಯೆ ಪರಿಹಾರ ಕಂಡಿಲ್ಲ.

ADVERTISEMENT

ಪಟ್ಟಣದ ಸೋನಿಯಾ ಗಾಂಧಿ ನಗರ, ಬೆಳಗಿನ ಪೇಟೆ, 2ನೇ ವಾರ್ಡ್‌ನ ಕರಡಿಗುಡ್ಡ ರಸ್ತೆ ವ್ಯಾಪ್ತಿಯ ಕಾಲೊನಿಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂಬುದು ಅಲ್ಲಿನ‌‌ ನಿವಾಸಿಗಳ ದೂರು.

ಮಲ್ಲಿಕಾರ್ಜುನ ಬೆಟ್ಟದ ಸಮೀಪ ಇರುವ ಕೆರೆಯು ನೀರಿಲ್ಲದೆ ಬತ್ತಿದೆ. ಆದರೂ ಬೆಳಗಿನ ಪೇಟೆಯ ‌ನಿವಾಸಿಗಳು, ಮಹಿಳೆಯರು ಅದೇ ಕೆರೆಯ ವರತಿ ನೀರನ್ನು ಕುಡಿಯುತ್ತಾರೆ. ಬಳಕೆಗೆ ಪುರಸಭೆ ಸರಬರಾಜು ಮಾಡುವ ನೀರನ್ನು ಅವಲಂಬಿಸಿದ್ದು, ವಾರ ಕಳೆದರೂ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ತಿಳಿಸಿದರು.

2ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಲ್ಲಿನ ನಿವಾಸಿಗಳು ಕಳೆದ ತಿಂಗಳು ರಸ್ತೆ ಕಾಮಗಾರಿಗೆ ಚಾಲನೆ ನೀಡಲು ತೆರಳಿದ್ದ ಎನ್.ಎಸ್.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ ಮುಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಪಟ್ಟಣದ ಅನೇಕ ಕಡೆ ಕುಡಿಯುವ ನೀರು ಪೈಪ್‌ಗಳು ದುರಸ್ತಿಯಾಗದ ಕಾರಣ ನೀರು ವ್ಯರ್ಥವಾಗಿ ಪೋಲಾಗುತ್ತಿದೆ.

‘14 ನೇ ವಾರ್ಡ್ ನಲ್ಲಿ ನೀರು ವ್ಯರ್ಥವಾಗಿ ರಸ್ತೆಗೆ ಹರಿಯುತ್ತಿರುವ ಕುರಿತು ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಮನಕ್ಕೆ ತಂದಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಕಾರಣ ನೀರು ಇದ್ದರೂ ಜನರಿಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ’ ಎಂದು ಪುರಸಭೆಯ ಸದಸ್ಯೆ ವನಿತಾ ಶಿವರಾಜ ನಾಯಕ ಮಂಗಳವಾರ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ 1 ಮತ್ತು 2ನೇ ವಾರ್ಡ್‌ಗಳಿಗೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ನೀರಿನ ಸಮಸ್ಯೆ ಕುರಿತು ಸಾರ್ವಜನಿಕರು ಗಮನಕ್ಕೆ ತಂದರೆ ಟ್ಯಾಂಕರ್ ಮೂಲಕ ಪೂರೈಸಲಾಗುವುದು ಎಂದು ಪುರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದಲ್ಲಿ ಈಚೆಗೆ ಅಮೃತ-2 ಯೋಜನೆ ಅಡಿಯಲ್ಲಿ ₹59.71 ಕೋಟಿ ವೆಚ್ಚದಲ್ಲಿ ಹೊಸದಾಗಿ ಪೈಪ್‌ಲೈನ್ ಹಾಗೂ ಕುಡಿಯುವ ನೀರಿನ ಟ್ಯಾಂಕರ್‌ಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮಾನ್ವಿ ಪಟ್ಟಣದ ಮುಖ್ಯ ರಸ್ತೆ ಹತ್ತಿರ ಕುಡಿಯುವ ನೀರು ಪೂರೈಸುವ ಖಾಸಗಿ ವಾಹನಕ್ಕಾಗಿ ಕಾದು‌ ಕುಳಿತಿರುವ ಮಕ್ಕಳು
ನಮ್ಮ ವಾರ್ಡ್‌ಗೆ ಎಂಟು ದಿನಗಳಿಂದ ನೀರು ಸರಬರಾಜು ಆಗದೆ ತೊಂದರೆಯಾಗಿದೆ.
–ರಾಮಲಿಂಗಪ್ಪ, ನಿವಾಸಿ ಬೆಳಗಿನ ಪೇಟೆ
ಕುಡಿಯುವ ನೀರಿನ ತೀವ್ರ ಅಭಾವ ಇರುವ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು.
–ಪರಶುರಾಮ ದೇವಮಾನೆ, ಪುರಸಭೆಯ ಮುಖ್ಯಾಧಿಕಾರಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.