ADVERTISEMENT

ಮಾನ್ವಿ: ಕುಡಿಯುವ ನೀರು ನಿರ್ವಹಣೆಗೆ ಅನುದಾನ ಕೊರತೆ

ಬಿಡುಗಡೆಯಾಗದ 2025-26ನೇ ಸಾಲಿನ 15ನೇ ಹಣಕಾಸು ಯೋಜನೆ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:00 IST
Last Updated 18 ಫೆಬ್ರುವರಿ 2026, 6:00 IST
ಮಾನ್ವಿ ತಾಲ್ಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವೈಫಲ್ಯ ಖಂಡಿಸಿ ಗ್ರಾಮಸ್ಥರು ಹಾಗೂ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು
ಮಾನ್ವಿ ತಾಲ್ಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವೈಫಲ್ಯ ಖಂಡಿಸಿ ಗ್ರಾಮಸ್ಥರು ಹಾಗೂ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು   

ಮಾನ್ವಿ: ತಾಲ್ಲೂಕಿನ ಒಟ್ಟು 17 ಗ್ರಾ.ಪಂಗಳಿಗೆ ಈವರೆಗೂ 2025-26ನೇ ಸಾಲಿನ 15ನೇ ಹಣಕಾಸು ಯೋಜನೆ ಅನುದಾನ ಬಿಡುಗಡೆಯಾಗಿಲ್ಲ. ಬೇಸಿಗೆ ಆರಂಭವಾಗುವ ಮುನ್ನವೇ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ನಿರ್ವಹಣೆಗೆ ಅನುದಾನ ಕೊರತೆ ಎದುರಾಗಿದೆ.

ಗ್ರಾಮಗಳಲ್ಲಿ ಕುಡಿಯುವ ನೀರು ನಿರ್ವಹಣೆ, ನೈರ್ಮಲ್ಯ, ಬೀದಿ ದೀಪಗಳ ನಿರ್ವಹಣೆ, ಪೈಪ್‌ಲೈನ್ ಹಾಗೂ ಮೋಟಾರ್ ಸೇರಿದಂತೆ ಇತರ ಸಣ್ಣಪುಟ್ಟ ದುರಸ್ತಿ ಮತ್ತು ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳು 15ನೇ ಹಣಕಾಸು ಯೋಜನೆ ಅನುದಾನ ಹಾಗೂ ಗ್ರಾಮಸ್ಥರಿಂದ ಸಂಗ್ರಹವಾದ ಕರವಸೂಲಿ(ತೆರಿಗೆ) ಹಣ ಬಳಸಲಾಗುತ್ತಿತ್ತು.

ಪ್ರತಿ ವರ್ಷ ತಾಲ್ಲೂಕಿನ ಎಲ್ಲ 17 ಗ್ರಾಮ ಪಂಚಾಯಿತಿಗಳಿಗೆ ಸುಮಾರು ₹ 10 ಕೋಟಿ ಅನುದಾನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬಿಡುಗಡೆಯಾಗುತ್ತಿತ್ತು. ಆದರೆ ಈ ವರ್ಷ ಬಿಡುಗಡೆಯಾಗಿಲ್ಲ. ಹೀಗಾಗಿ ಕುಡಿಯುವ ನೀರು ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ADVERTISEMENT

ಇನ್ನೂ ಕೆಲವು ಗ್ರಾ.ಪಂಗಳಲ್ಲಿ ಕಳೆದ ವರ್ಷ ಕುಡಿಯುವ ನೀರಿನ ಕಾಮಗಾರಿಗಾಗಿ ಖರೀದಿಸಿದ್ದ ಸಾಮಗ್ರಿಗಳ ಬಿಲ್ ಪಾವತಿಯಾಗಿಲ್ಲ. ಬಾಕಿ ಉಳಿಸಿಕೊಂಡಿದ್ದು, ಈ ಬಾರಿ ಸಾಮಗ್ರಿಗಳ ಪೂರೈಕೆಗೆ ಅಂಗಡಿ ಮಾಲೀಕರು ಸಿದ್ಧರಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾ.ಪಂ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಕಳೆದ ವರ್ಷ ಉಟಕನೂರು ಗ್ರಾ.ಪಂನಿಂದ ಖರೀದಿಸಿದ್ದ ಸಾಮಗ್ರಿಗಳ ಬಿಲ್ ಪಾವತಿಸಿರಲಿಲ್ಲ. ಅಂಗಡಿ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಾಲ್ಲೂಕಿನ ಉಟಕನೂರು ಗ್ರಾ.ಪಂ ಹಾಗೂ ತಾ.ಪಂ ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡಿದ್ದರು.

‘ಬೇಸಿಗೆ ಮುನ್ನ ಸರ್ಕಾರ 15ನೇ ಹಣಕಾಸು ಯೋಜನೆ ಅನುದಾನ ಬಿಡುಗಡೆ ಮಾಡದಿದ್ದರೆ, ಗ್ರಾಮಗಳಲ್ಲಿ ಕುಡಿಯುವ ನೀರಿನ ನಿರ್ವಹಣೆ ಕಾಮಗಾರಿ ಕೈಗೊಳ್ಳವುದು ದೊಡ್ಡ ಸವಾಲಿನ ಕೆಲಸ’ ಎಂದು ಗ್ರಾ.ಪಂ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಅಪೂರ್ಣ: ‘ಹಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕೈಗೊಂಡಿದ್ದ ಕುಡಿಯುವ ನೀರಿನ ಕಾಮಗಾರಿಗಳು ಅಪೂರ್ಣಗೊಂಡಿವೆ. ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಚಿಕ್ಕಕೊಟ್ನೆಕಲ್ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ಗ್ರಾ.ಪಂ ಆಡಳಿತ ವೈಫಲ್ಯ ಖಂಡಿಸಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಗ್ರಾ.ಪಂ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವುದನ್ನು ತಡೆಯಲು ಟಾಸ್ಕ್‌ಫೋರ್ಸ್ ಸಭೆಗಳು ಇನ್ನೂ ನಡೆದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸಭೆ ನಡೆಸಬೇಕು. 15ನೇ ಹಣಕಾಸು ಯೋಜನೆ ಅನುದಾನ ಬಿಡುಗಡೆಗೊಳಿಸಬೇಕು ಎಂಬುದನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಸ್ಥಳೀಯ ಸಂಘ–ಸಂಸ್ಥೆಗಳ ಪ್ರಮುಖರು ಆಗ್ರಹಿಸಿದ್ದಾರೆ.

ಗ್ರಾ.ಪಂ ಗಳಿಗೆ 15ನೇ ಹಣಕಾಸು ಯೋಜನೆ ಅನುದಾನ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಅಗತ್ಯ ಕಾಮಗಾರಿ ಕೈಗೊಳ್ಳಲಾಗುವುದು.
ಖಾಲೀದ್ ಅಹ್ಮದ್, ತಾ.ಪಂ ಇಒ ಮಾನ್ವಿ
ಗ್ರಾಮದಲ್ಲಿ ಜೆಜೆಎಂ ಯೋಜನೆಯಿಂದ ಹನಿ ನೀರು ಪೂರೈಕೆಯಾಗಿಲ್ಲ. ಕೊಳವೆ ಬಾವಿಯ ಮೋಟಾರ್ ನಿರ್ವಹಣೆ ಸರಿಯಾಗಿಲ್ಲ. ಕಾರಣ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
ರಮೇಶ ಭೋವಿ, ಚಿಕ್ಕಕೊಟ್ನೇಕಲ್ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.