ADVERTISEMENT

ಮಾರ್ಚ್‌ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಿ: ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:01 IST
Last Updated 7 ಜನವರಿ 2026, 6:01 IST
ಲಿಂಗಸುಗೂರು ತಾ.ಪಂ ಸಭಾಂಗಣದಲ್ಲಿ ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಲಿಂಗಸುಗೂರು ತಾ.ಪಂ ಸಭಾಂಗಣದಲ್ಲಿ ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಲಿಂಗಸುಗೂರು: ‘ಮಾರ್ಚ್‌ ಅಂತ್ಯದೊಳಗೆ ಇಲಾಖೆಗೆ ನೀಡಿರುವ ಗುರಿ ಸಾಧಿಸುವತ್ತ ಗಮನ ಹರಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ.ವಿಜಯಶಂಕರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ತಾಲ್ಲೂಕು ಪಂಚಾಯಿತಿಯಿಂದ ಮಂಜೂರಾಗಿರುವ ಅನುದಾನದಲ್ಲಿ ಅಗತ್ಯಕ್ಕನುಸಾರವಾಗಿ ಖರ್ಚು ಮಾಡುವ ಮೂಲಕ ನಿಗದಿಪಡಿಸಿರುವ ಗುರಿ ಸಾಧಿಸಬೇಕು. ವಿನಾಕಾರಣ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ’ ಎಂದರು.

ADVERTISEMENT

‘ತಾಲ್ಲೂಕು ಪಂಚಾಯಿತಿ ತಾಲ್ಲೂಕು ಆರೋಗ್ಯ ಇಲಾಖೆಗೆ ನೀಡಿರುವ ₹13 ಲಕ್ಷ ಅನುದಾನವನ್ನು ಕಟ್ಟಡ ಮತ್ತು ಸಲಕರಣೆಗೆ ಬಳಕೆ ಮಾಡಬೇಕು. ರೋಗಿಗಳಿಗೆ ಅನುಕೂಲವಾಗುವ ಸಾಮಗ್ರಿಗಳನ್ನು ಖರೀದಿಸಬೇಕು’ ಎಂದು ಟಿಎಚ್‌ಒ ಡಾ.ಅಮರೇಶ ಪಾಟೀಲ ಅವರಿಗೆ ಸೂಚಿಸಿದರು.

‘ಬಿಲ್ ಸಲ್ಲಿಸಲು ಮೂರು ತಿಂಗಳು ವಿಳಂಬ ಮಾಡಿದರೆ ಹೇಗೆ? ಎರಡು ದಿನಗಳಲ್ಲಿ ಬಿಲ್ ಸಲ್ಲಿಸಬೇಕು’ ಎಂದು ಸಿಡಿಪಿಒಗೆ ಸೂಚಿಸಿದರು.

‘ಅವಶ್ಯಕತೆ ಇಲ್ಲದೆ ಪ್ರಸ್ತಾವ ಸಲ್ಲಿಸಬೇಡಿ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಅನುದಾನ ಬಳಕೆ ಮಾಡಬೇಕು. ದೇವರಭೂಪುರ, ಮಾಚನೂರು ಶಾಲೆಯಲ್ಲಿ ಕಟ್ಟಡದ ಅವಶ್ಯಕತೆ ಇದ್ದರೆ ನಿರ್ಮಿಸಿ, ಇಲ್ಲವೇ ತಾಲ್ಲೂಕಿನಲ್ಲಿ ತೀರಾ ಅಗತ್ಯವಿರುವ ಕಡೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಆರ್‌ಡಿಪಿಆರ್ ಎಇಇಗೆ ಸೂಚಿಸಿದರು.

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ನ್ಯಾಯಾಲಯದ ಆದೇಶ ಮೇರೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗೆ ಕೂಡಲೇ ವೇತನ ಬಿಡುಗಡೆ ಮಾಡಬೇಕು. ಎರಡು ದಿನಗಳಲ್ಲಿ ವೇತನ ಪಾವತಿಸಿ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ, ತಾಲ್ಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.