ADVERTISEMENT

ಮಸ್ಕಿ: ‘ಬಿಜೆಪಿ ಅಧಿಕಾರದಲ್ಲಿ ತಾಲ್ಲೂಕಿನ ಅಭಿವೃದ್ಧಿ ಕುಂಟಿತ’

ಪ್ರಜಾಸೌಧ’ ನಿರ್ಮಾಣಕ್ಕೆ ಶಾಸಕ ತುರ್ವಿಹಾಳ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:39 IST
Last Updated 11 ಜುಲೈ 2025, 7:39 IST
ಮಸ್ಕಿಯಲ್ಲಿ ಗುರುವಾರ ನಡೆದ ‘ಪ್ರಜಾಸೌಧ’ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮವನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು
ಮಸ್ಕಿಯಲ್ಲಿ ಗುರುವಾರ ನಡೆದ ‘ಪ್ರಜಾಸೌಧ’ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮವನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು   

ಮಸ್ಕಿ: ‘ಬಿಜೆಪಿ ಶಾಸಕರ ಅವಧಿಯಲ್ಲಿ ಮಸ್ಕಿ ತಾಲ್ಲೂಕಿನ ಅಭಿವೃದ್ಧಿ ಕುಂಟಿತಗೊಂಡಿತ್ತು. ಎರಡು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾಣುತ್ತಿದೆ’ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ವೆಂಕಟಾಪೂರ ರಸ್ತೆಯಲ್ಲಿ ಗುರುವಾರ ತಾಲ್ಲೂಕು ಆಡಳಿತ ಕಚೇರಿ ‘ಪ್ರಜಾಸೌಧ’ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿಗೆ ಪೂರ್ಣ ಪ್ರಮಾಣದ ಕಚೇರಿ ಆರಂಭಿಸುವಂತೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗಿದೆ. ₹8.60 ಕೋಟಿ ವೆಚ್ಚದ ಪ್ರಜಾಸೌಧ ಕಟ್ಟಡ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ.  ₹4.60 ಕೋಟಿವೆಚ್ಚದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡಕ್ಕೆ ಚಾಲನೆ ನೀಡಲಾಗಿದೆ. 5 (ಎ) ಕಾಲುವೆ ನಿರ್ಮಾಣಕ್ಕೆ ಡಿಪಿಆರ್ ಆಗಿದ್ದು ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ. ಸರ್ಕಾರ ಕನಕನಾಲಾ ಅಭಿವೃದ್ದಿಗೆ ₹136 ಕೋಟಿ ಅನುದಾನ ನೀಡಿದೆ ಎಂದರು.

ADVERTISEMENT

ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಾತನಾಡಿ, ‘ಶಾಸಕರು ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಸಬ್ ರಜಿಸ್ಟ್ರಾರ್ ಕಚೇರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಹಾಯಕ ಅಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಶೀಲ್ದಾರ್ ಮಲ್ಲಪ್ಪ ಯರಗೋಳ ಮಾತನಾಡಿದರು.

ಸಿಪಿಐ ಬಾಲಚಂದ್ರ ಡಿ. ಲಕ್ಕಂ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಸೋಮನಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಪಂಪಾಪತಿ ಹೂಗಾರ, ಹೌಸೊಂಗ್ ಬೋರ್ಡ್ ಎಇಇ ತನುಜೇಂದ್ರ ಪಾಟೀಲ ಇದ್ದರು.

ಮಾಜಿ ಸಚಿವ ಶ್ರೀರಾಮುಲು ಅವರು ಸುಳ್ಳು ಹೇಳಿ ಹೇಳಿ ಈ ಪರಿಸ್ಥಿತಿಗೆ ಬಂದಿದ್ದಾರೆ. ರಾಮುಲು ಸಚಿವರಾಗಿದ್ದ ಸಂದರ್ಭದಲ್ಲಿ ನಾಯಕ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ
ಬಸನಗೌಡ ತುರ್ವಿಹಾಳ ಶಾಸಕ

‘ಕೋಟಿ ಕೋಟಿ ಲೂಟಿ’:

ಕ್ಷೇತ್ರದಲ್ಲಿ ಹಿಂದೆ ಆಡಳಿತ ನಡೆಸಿದ ಬಿಜೆಪಿಯ ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಕೋಟಿಗಟ್ಟಲೇ ಹಣ ಲೂಟಿ ಮಾಡಿದ್ದಾರೆ‌. ಸಣ್ಣ ನೀರಾವರಿ ಇಲಾಖೆ ವಸತಿ ಮನೆಗಳ ನಿವೇಶನ ಖರೀದಿಯಲ್ಲಿ ಅವರು ಲೂಟಿ ಮಾಡಿದ್ದಾರೆ. ಅವರಿಗೆ ನನ್ನ ಆಡಳಿತದ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ. ತಮ್ಮ ಅವದಿಯಲ್ಲಿ ನಡೆದ ಲೂಟಿ ಬಗ್ಗೆ ಮಾತನಾಡಲಿ ಎಂದು ತುರ್ವಿಹಾಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.