ADVERTISEMENT

ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡಿ

ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:05 IST
Last Updated 12 ಜೂನ್ 2022, 6:05 IST
ಲಿಂಗಸುಗೂರಿನಲ್ಲಿ ಶುಕ್ರವಾರ ವೀರಶೈವ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಶ್ರೀಶೈಲ ಪೀಠದ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವ ಪೂರ್ವಭಾವಿ ಧಾರ್ಮಿಕ ಸಭೆಯನ್ನು ಶ್ರೀಶೈಲ ಪೀಠದ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು
ಲಿಂಗಸುಗೂರಿನಲ್ಲಿ ಶುಕ್ರವಾರ ವೀರಶೈವ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಶ್ರೀಶೈಲ ಪೀಠದ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವ ಪೂರ್ವಭಾವಿ ಧಾರ್ಮಿಕ ಸಭೆಯನ್ನು ಶ್ರೀಶೈಲ ಪೀಠದ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು   

ಲಿಂಗಸುಗೂರು: ‘ಶ್ರೀಶೈಲ ಪೀಠದ ಭಕ್ತರ ಸಹಯೋಗದಲ್ಲಿ ಪಾದಯಾತ್ರೆಯ ಜತೆಗೆ ವಿಭಿನ್ನ ಧರ್ಮ ಜಾಗೃತಿ, ಸಮಾಜಮುಖಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಕಾರಣ ಭಕ್ತರು ತನು, ಮನ, ಧನದ ಮೂಲಕ ಸಹಕರಿಸಬೇಕು’ ಎಂದು ಶ್ರೀಶೈಲ ಪೀಠದ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮನವಿ ಮಾಡಿದರು.

ಶುಕ್ರವಾರ ನಡೆದ ಶ್ರೀಶೈಲ ಪೀಠದ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣ ಮಹೋತ್ಸವ ಪೂರ್ವಭಾವಿ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘2022ರ ಅಕ್ಟೋಬರ್ 29ರಂದು ಚಿಕ್ಕೋಡಿ ತಾಲ್ಲೂಕು ಯಡೂರಿನಿಂದ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ವಾಸ್ತವ್ಯ ಮಾಡುವ ಸ್ಥಳಗಳಲ್ಲಿ ಸಾಮೂಹಿಕ ಲಿಂಗಧಾರಣೆ, ದಾರಿಯುದ್ದಕ್ಕೂ ಭಕ್ತರಿಂದ ದುಶ್ಚಟಗಳ ಭಿಕ್ಷೆ ಹಾಗೂ ರಸ್ತೆಯ ಎರಡು ಬದಿಗಳಲ್ಲಿ ಸಸಿ ನೆಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಒಂದು ತಿಂಗಳ ಪಾದಯಾತ್ರೆಯ ನಂತರ ಪೀಠದಲ್ಲಿ ಹೋಮ, ತುಲಾಭಾರ, ಅನ್ನದಾಸೋಹ, ಇಷ್ಟಲಿಂಗ ಪೂಜೆ ಸೇರಿದಂತೆ ಆಂಧ್ರ ಸರ್ಕಾರ ಪೀಠಕ್ಕೆ ನೀಡಿದ ಜಮೀನಿನಲ್ಲಿ ಭಕ್ತರು ವಿವಿಧ ಮೂಲಗಳಿಂದ ನೀಡುವ ಕಾಣಿಕೆಯಿಂದ ಸುಸಜ್ಜಿತ ಆಸ್ಪತ್ರೆ, ಕಂಬಿ ಮಂಟಪ, ವಸತಿ ಸಮುಚ್ಛಯ ನಿರ್ಮಾಣದಂಥ ವಿಭಿನ್ನ ಕಾರ್ಯಕ್ರಮ ಆಯೋಜಿಸಿದೆ. 2023 ಜನವರಿ 10 ರಿಂದ 15ರ ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಸೂಚಿಸಿದರು.

ದೇವರಭೂಪುರದ ಅಭಿನವ ಗುರುಗಜದಂಡ ಶಿವಾಚಾರ್ಯರು, ಯರಡೋಣಿಯ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ‘ಶ್ರೀಶೈಲ ದ್ವಾಪರ, ತ್ರೇತಾಯುಗದಿಂದ ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜ, 12ನೇ ಶತಮಾನದ ಶರಣ ಶರಣೆಯರು ವಾಸ್ತವ್ಯ ಮಾಡಿ ಶ್ರೀಶೈಲ ಮಲ್ಲಿಕಾರ್ಜುನನ ಸೇವೆ, ಧ್ಯಾನ ಮಾಡಿರುವುದು ಐತಿಹ್ಯ. ಅಂಥ ಪವಿತ್ರ ಸ್ಥಳದಲ್ಲಿ ಪೀಠ ಧರ್ಮ ಜಾಗೃತಿ ಜತೆಗೆ ಸಮಾಜಮುಖಿ ಕಾರ್ಯ ನಡೆಸುತ್ತಿದ್ದು ತಾವುಗಳೆಲ್ಲ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಗುರುಗುಂಟಾದ ಸದಾನಂದ ಶಿವಾಚಾರ್ಯರು, ಸಂತೆಕೆಲ್ಲೂರಿನ ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿದರು.

ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರಾದ ಭೂಪನಗೌಡ ಕರಡಕಲ್ಲ, ಗಿರಿಮಲ್ಲನಗೌಡ ಪಾಟೀಲ, ವೀರನಗೌಡ ಲೆಕ್ಕಿಹಾಳ, ಬಸವರಾಜಗೌಡ ಗಣೆಕಲ್ಲ, ಮಲ್ಲಣ್ಣ ವಾರದ, ಪ್ರಭುಸ್ವಾಮಿ ಅತ್ನೂರು ಸೇರಿದಂತೆ ಶಾಸ್ತ್ರಿಗಳಾದ ಜಡೆಯ್ಯಸ್ವಾಮಿ, ಶಂಭುಲಿಂಗಯ್ಯ, ವೀರಭದ್ರಯ್ಯ ಹಾಗೂ ಶಿವಕುಮಾರ ಯರಡೋಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.