ಬೀದಿನಾಯಿಗಳನ್ನು ಬೇರೆಡೆ ಸಾಗಿಸಬೇಕು ಎಂದು ಒತ್ತಾಯಿಸಿ ಸರ್ವೋದಯ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ವಲಯ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ರಾಯಚೂರಿನಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಯಚೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿನಾಯಿಗಳ ದಾಳಿಗೆ ತುತ್ತಾಗಿ ಮಡ್ಡಿಪೇಟೆ ಬಡಾವಣೆಯ ಯುವತಿ ಸಾವನ್ನಪ್ಪಿದ್ದು, ನಗರಸಭೆ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಹಾಗೂ ವಿವಿಧ ಸಂಸ್ಥೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಕೊಳೆಗೇರಿ ಬಡಾವಣೆಗಳಾದ ಎಲ್ ಬಿಎಸ್ ನಗರ, ಸಿಯತಲಾಬ್, ಮಡ್ಡಿಪೇಟೆ, ಹರಿಜನವಾಡ, ಅರಬ್ ಮೊಹಲ್ಲಾ ಮಾತ್ರವಲ್ಲದೇ ಸ್ಟೇಶನ್ ರಸ್ತೆ, ಕೇಂದ್ರ ಬಸ್ ನಿಲ್ದಾಣ ಸೇರಿ ಅನೇಕ ಬಡಾವಣೆಗಳಲ್ಲಿ ಸಾರ್ವಜನಿಕರು, ಆಟ ಆಡುವ ಮಕ್ಕಳು, ಪ್ರಯಾಣಿಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಂಡ ವರದಿಯಾಗಿವೆ. ಅನೇಕರು ಚಕಿತ್ಸೆ ಪಡೆದು ತಮ್ಮ ನೋವು ನುಂಗಿಕೊಂಡಿದ್ದಾರೆ.
ಅನೇಕ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಬೀದಿ ನಾಯಿಗಳ ಹಿಂಡು ರಸ್ತೆಗಳ ಮಧ್ಯೆ ಮಲಗಿಕೊಂಡಿರುತ್ತವೆ. ಆಟವಾಡುವ ಮಕ್ಕಳು, ಅಪರಿಚಿತ ಜನರು ಮಾತ್ರವಲ್ಲದೇ ರಾತ್ರಿ ಹಾಗೂ ಬೆಳಗಿನ ಜಾವ ದ್ವಿಚಕ್ರ ವಾಹನಗಳಲ್ಲಿ ತಿರುಗಾಡುವ ಸವಾರರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೇ ಬಿಡಾಡಿ ದನಗಳು ರಸ್ತೆಯ ಮಧ್ಯೆ ಮಲಗಿ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿವೆ.
ನಗರದ ಜೈನ್ ರಸ್ತೆ, ಗೋಶಾಲ ರಸ್ತೆ, ಸ್ಟೇಶನ್ ರಸ್ತೆ ಹಾಗೂ ಗಂಜ್ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಅನೇಕ ಬಡಾವಣೆಗಳಲ್ಲಿ ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದವು. ಬಿಡಾಡಿ ದನಗಳ ಹಾಗೂ ಬೀದಿ ನಾಯಿಗಳ ಹಾವಳಿ ತಡೆದು ನಾಗರಿಕರಿಗೆ ಸುರಕ್ಷತೆ ನೀಡಬೇಕು ಎಂದು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದರೂ ಕಾಟಾಚಾರಕ್ಕೆ ಒಂದೆರೆಡು ಬಡಾವಣೆಗಳಲ್ಲಿ ನಾಯಿ ಹಿಡಿಯುವ ಕಾರ್ಯಾಚರಣೆ ನಡೆಸಿ ಗಾಢ ನಿದ್ರೆಗೆ ಜಾರಿತ್ತು.
‘ಯುವತಿಯ ಸಾವಿನ ಬಳಿಕವಾದರೂ ಪೌರಾಯುಕ್ತ ಗುರುಸಿದ್ದಯ್ಯ ಕೆಲಸ ಮಾಡಲಿ’ ಎಂದು ಸಾಮಾಜಿಕ ಕಾರ್ಯಕರ್ತ ಅಂಬಾಜಿ ರಾವ್ ಒತ್ತಾಯಿಸಿದ್ದಾರೆ.
’ಬೀದಿ ನಾಯಿಗಳ ದಾಳಿಗೆ ಅಮಾಯಕ ಬಡ ಜೀವವೊಂದು ಬಲಿಯಾಗಿದೆ. ನಗರಸಭೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ
ಸಚಿವ ಎನ್. ಎಸ್. ಬೋಸರಾಜು ಈಗಲಾದರೂ ಎಚ್ಚೆತ್ತು ಸಾರ್ವಜನಿಕರ ರಕ್ಷಣೆಗೆ ಮುಂದಾಗಲಿ ಎಂದು ರೈಲ್ವೆ ಮಂಡಳಿ ಸಲಹಾ ಸಮಿತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಡಾ.ಬಾಬುರಾವ್ ಮನವಿ
ಮಾಡಿದ್ದಾರೆ.
ಸಾವಿನ ಬಳಿಕ ಎಚ್ಚೆತ್ತ ನಗರಭೆ: ಬೀದಿ ನಾಯಿಗಳ ದಾಳಿಗೆ ಮಡ್ಡಿಪೇಟೆ ಬಡಾವಣೆಯ ಯುವತಿ ಮೃತಪಟ್ಟ ಬಳಿಕ ಎಚ್ಚೆತ್ತ ನಗರಸಭೆ ಗುರುವಾರ ಮಹಾರಾಷ್ಟ್ರ ಮೂಲದ ಯುವಕರ ತಂಡದಿಂದ ನಗರದ ಎಲ್‌ಬಿಎಸ್ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿ 35 ನಾಯಿಗಳನ್ನು
ಸೆರೆಹಿಡಿದರು.
ನಗರಸಭೆಯ ಪ್ಯಾಕೇಜ್ ನಂಬರ್ 7ರ ಅಡಿಯಲ್ಲಿ ವಾರ್ಡ್ ನಂಬರ್ 27ರ ಜಲಾಲ್ ನಗರ, ಪೊಲೀಸ್ ಕಾಲೊನಿ, 28ರ ಆಶ್ರಯ ಕಾಲೊನಿ, ವಿಶ್ವನಾಥ ಕಾಲೊನಿ ಹಾಗೂ ವಾರ್ಡ್ ನಂಬರ್ 29ರ ಎಲ್ ಬಿಎಸ್ ನಗರದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಗರಸಭೆಯ ಅಧಿಕಾರಿ ಎಂ.ಡಿ ಖಾನ್, ಅಶೋಕ, ಹನುಮಂತ ಜಗ್ಲಿ, ಡಿ.ಅಮರೇಶ ಉಪಸ್ಥಿತರಿದ್ದರು.
ನಾಯಿಗಳ ದಾಳಿಗೆ ತುತ್ತಾಗಿದ್ದ ಯುವತಿ ಸಾವು
ರಾಯಚೂರು: ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಕೆಳಗೆ ಬಿದ್ದ ಯುವತಿ ಬುಧವಾರ ಸಾವನಪ್ಪಿದ್ದಾಳೆ.
ನಗರದ ವಾರ್ಡ್ ನಂ 23 ಮಡ್ಡಿಪೇಟೆ ಬಡಾವಣೆಯ ನಿವಾಸಿ ಮಹಾದೇವಿ ಮುನಿಯಪ್ಪ (20) ಮೃತಪಟ್ಟ ದುರ್ದೈವಿ. ಡಿ.7 ರಂದು ಬೆಳಿಗ್ಗೆ ಮನೆಯ ಮುಂದೆ ನಿಂತಾಗ ಬಿದಿ ನಾಯಿಗಳ ದಂಡು ದಾಳಿ ಮಾಡಿದ್ದವು. ಪ್ರಜ್ಞೆ ತಪ್ಪಿದ ಆಕೆಯನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಬಳಿಕ ನಗರದ ರಿಮ್ಸ್ ಹಾಗೂ ಬಳ್ಳಾರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಬೆಂಗಳೂರಿಗೆ ಹೋಗುವಂತೆ ಹೇಳಿದಾಗ ಆರ್ಥಿಕ ಸ್ಥಿತಿ ಸರಿಯಾಗಿರದ ಕಾರಣ ಬಳಿಕ ರಿಮ್ಸ್ ನಲ್ಲಿಯೇ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತು. ಜೀವನ್ಮರಣ ಹೋರಾಡುತ್ತಿದ್ದ ಮಹಾದೇವಿ ಚಿಕಿತ್ಸಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
‘ಬೀದಿನಾಯಿಗಳ ಹಾವಳಿ ನಿಯಂತ್ರಣ ಹಾಗೂ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಸಾವನ್ನಪಿದ ಯುವತಿಯ ಕುಟುಂಬಕ್ಕೆ ಪರಿಹಾರದ ಕುರಿತು ಚರ್ಚಿಸಲಾಗುವುದುನಿತಿಶ್ ಕೆ. ಜಿಲ್ಲಾಧಿಕಾರಿ
ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ ಯುವತಿ ಕುಟುಂಬಕ್ಕೆ ನಗರಸಭೆಯಿಂದ ₹25 ಲಕ್ಷ ಪರಿಹಾರ ನೀಡಬೇಕುಬಾಬುರಾವ್, ರೈಲ್ವೆ ಮಂಡಳಿ ಸಲಹಾ ಸಮಿತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.