ADVERTISEMENT

ಕವಿತಾಳ: ಪ್ರೌಢಶಾಲೆಯಲ್ಲಿ ಮಿನಿ ವಿಜ್ಞಾನ ಕೇಂದ್ರ

ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಹೊಂದಿದ ಮೊದಲ ಸರ್ಕಾರಿ ಶಾಲೆ ಎನ್ನುವ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 6:18 IST
Last Updated 20 ಫೆಬ್ರುವರಿ 2025, 6:18 IST
ಕವಿತಾಳದ ಬಾಲಕಿಯರ ಸರ್ಕಾರಿ ಶಾಲೆಯ ವಿಜ್ಞಾನ ಕೇಂದ್ರದಲ್ಲಿ ಶಿಕ್ಷಕಿ ಪುಷ್ಪಲತಾ ಮಕ್ಕಳಿಗೆ ಪ್ರಾಯೋಗಿಕ ಮಾಹಿತಿ ನೀಡುತ್ತಿರುವುದು
ಕವಿತಾಳದ ಬಾಲಕಿಯರ ಸರ್ಕಾರಿ ಶಾಲೆಯ ವಿಜ್ಞಾನ ಕೇಂದ್ರದಲ್ಲಿ ಶಿಕ್ಷಕಿ ಪುಷ್ಪಲತಾ ಮಕ್ಕಳಿಗೆ ಪ್ರಾಯೋಗಿಕ ಮಾಹಿತಿ ನೀಡುತ್ತಿರುವುದು   

ಕವಿತಾಳ: ಡಿಜಿಟಲ್‌ ಗ್ರಂಥಾಲಯ ಮತ್ತು ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಹೊಂದಿದ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಇದೀಗ (ಚಿಕ್ಕ) ಮಿನಿ ವಿಜ್ಞಾನ ಕೇಂದ್ರದ ಗರಿ
ಮೂಡಿದೆ.

ವೊಲ್ವೊ ಗ್ರೂಪ್‌ ಟ್ರಸ್ಟ್‌ ಪ್ರಾಯೋಜಿತ (ಎಸ್‌ಟಿಇಎಂ) ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಮ್ಯಾಥ್ಸ್‌ ವತಿಯಿಂದ ಸ್ಥಾಪಿಸಿದ ಮಿನಿ ವಿಜ್ಞಾನ ಕೇಂದ್ರ ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಾಯೋಗಿಕ ಕಲಿಕೆಗೆ ಮಕ್ಕಳನ್ನು ಆಕರ್ಷಿಸುತ್ತಿದೆ.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾದ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳು ಕಬ್ಬಿಣದ ಕಡಲೆ ಎನ್ನಲಾಗುತ್ತದೆ ಆದರೆ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಾಯೋಗಿಕ ಕಲಿಕೆಯ ಮೂಲಕ ಮಕ್ಕಳ ಮನಸ್ಸಿಗೆ ನಾಟುವಂತೆ ಸರಳವಾಗಿ ಬೋಧಿಸಲು ಈ ವಿಜ್ಞಾನ ಕೇಂದ್ರ ಪರಿಣಾಮಕಾರಿಯಾಗಲಿದೆ ಎನ್ನುವುದು ಇಲ್ಲಿನ ಶಿಕ್ಷಕರ ಅಭಿಪ್ರಾಯ.

ADVERTISEMENT

‘8 ರಿಂದ 10 ನೇ ತರಗತಿಯ 467 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮ್ಯಾರಾಥಾನ್‌ನಲ್ಲಿ 54 ಸಾವಿರ ಶಾಲೆಗಳು, 1.98 ಲಕ್ಷ ಮಕ್ಕಳು ಮತ್ತು 1.03 ಲಕ್ಷ ಶಿಕ್ಷಕರು ಭಾಗವಹಿಸಿದ್ದರು ಅದರಲ್ಲಿ ಆಯ್ದ 1500 ಮಕ್ಕಳಲ್ಲಿ
ಕ್ಯೂಆರ್‌ ಲರ್ನಿಂಗ್‌ನಲ್ಲಿ 430ನೇ ಸ್ಥಾನ ಹಾಗೂ ಡೆಲ್‌ ಟೆಕ್ನಾಲಜಿಯ ಪ್ಯಾನ್‌ ಇಂಡಿಯಾ ಸ್ಪರ್ಧೆಯ100 ಶಾಲೆಗಳಲ್ಲಿ 87ನೇ ಸ್ಥಾನ ಪಡೆದಿರುವುದು ಈ ಶಾಲೆಯ ವಿಶೇಷತೆ’ ಎಂದು ಶಿಕ್ಷಕ ಪ್ರಾಣೇಶ ತಿಳಿಸಿದರು.

‘ನೂರಕ್ಕೂ ಅಧಿಕ ವಿಜ್ಞಾನದ ಪ್ರಾಯೋಗಿಕ ಮಾದರಿಗಳನ್ನು ಹೊಂದಿದ ಮಿನಿ ವಿಜ್ಞಾನ ಕೇಂದ್ರದಲ್ಲಿ ಯಂತ್ರಗಳು, ಅದಕ್ಕೆ ಸಂಬಂದಿಸಿದ ಸಂಪೂರ್ಣ ಮಾಹಿತಿ ಒದಗಿಸುವ ಭಿತ್ತಿ ಪತ್ರ ಅಳವಡಿಸಲಾಗಿದೆ. ಪ್ರಾಣಿಕೋಶ, ಮಾನವ ದೇಹ ರಚನೆ, ನ್ಯೂಟನ್‌ ಕ್ರೂಡಲ್‌, ಜಡತೆಯ ಸಿದ್ದಾಂತ, ವಿಸ್ಕೋಸಿಟಿ ಟ್ಯೂಬ್‌, ಹಾರುವ ಚುಂಬಕ, ಚುಂಬಕೀಯ ಕ್ಷೇತ್ರ ನಲ್‌, ಸರಳ ಕ್ಯಾಮೆರಾ ಮತ್ತು ಆಲಸ್ಯದ ನಳಿ ಹೀಗೆ ಹತ್ತು ಹಲವು ಮಾದರಿಗಳು ಮಕ್ಕಳಲ್ಲಿ ಕಲಿಕಾ ಆಸಕ್ತಿ ಮತ್ತು ಕುತೂಹಲ ಮೂಡಿಸುತ್ತವೆ’ ಎಂದು ವಿಜ್ಞಾನ ವಿಷಯ ಅತಿಥಿ ಶಿಕ್ಷಕಿ ಪುಷ್ಪಲತಾ ಹೇಳಿದರು.

ಸರ್ಕಾರ ಮತ್ತು ಸಂಘ ಸಂಸ್ಥೆಗಳ ನೆರವು ಪಡೆದು ಶಾಲೆಯ ಅಭಿವೃದ್ಧಿಯ ಬಗ್ಗೆ ಮುಖ್ಯ ಶಿಕ್ಷಕರು ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ
ಮಂಜುನಾಥ ಭೋವಿ ಕವಿತಾಳ ಎಸ್‌ಡಿಎಂಸಿ ಅಧ್ಯಕ್ಷ
ಭವಿಷ್ಯದಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಮಿನಿ ವಿಜ್ಞಾನ ಕೇಂದ್ರ ಮಕ್ಕಳಿಗೆ ಉತ್ತೇಜನ ನೀಡಲಿದೆ
ಮಂಜುಳಾ ಗಿರೀಶ್‌ ಅಂಗಡಿ, ಮುಖ್ಯ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.