
ರಾಯಚೂರು: ಪಡುವಣ ದಿಕ್ಕಿನಲ್ಲಿ ಬಾನಿನಿಂದ ಸೂರ್ಯ ಜಾರುತ್ತಿದ್ದಂತೆಯೇ ಬಿಸಿಲೂರಿನ ಕ್ರೀಡಾಂಗಣದಲ್ಲಿ ಝಗಮಗಿಸುವ ವಿದ್ಯುತ್ ದೀಪಗಳು ಹೊತ್ತಿಕೊಂಡವು. ಬೆಳಕಿನ ಹಬ್ಬದಂತೆ ಗೋಚರಿಸಿದ ವೇದಿಕೆಯಲ್ಲಿ ಬುಧವಾರ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮೆರುಗು ಪಡೆದುಕೊಂಡಿತು.
ಕ್ರೀಡಾ ಪ್ರೇಮಿಗಳ ಕಲರವ ಇನ್ನಷ್ಟು ಉತ್ಸಾಹ ತುಂಬಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ರಾಜ್ಯಮಟ್ಟದ ‘ಮಿಸ್ಟರ್ ಕಲ್ಯಾಣ ಕರ್ನಾಟಕ’ ದೇಹದಾರ್ಢ್ಯ ಸ್ಪರ್ಧೆ ಅದ್ದೂರಿಯಾಗಿ ನಡೆಯಿತು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ದೇಹದಾರ್ಢ್ಯ ಪಟುಗಳು ಮೈಗೆ ತಾಮ್ರ ಹಾಗೂ ಸ್ವರ್ಣ ವರ್ಣದ ತೈಲ ಸವರಿಕೊಂಡು ಕಟ್ಟುಮಸ್ತಾದ ದೇಹದೊಂದಿಗೆ ಸ್ನಾಯುಗಳು ಹಾಗೂ ಅದರ ಸ್ಥಿತಿಯನ್ನು ಪ್ರದರ್ಶಿಸಿದರು.
ದೇಹದ ಮುಂಭಾಗದ, ಹಿಂಭಾಗದ ಲ್ಯಾಟ್ ಸ್ಪ್ರೆಡ್, ಬೈಸೆಪ್ಸ್ ಮತ್ತು ಹೊಟ್ಟೆಯ ಭಂಗಿಗಳನ್ನು ನಿರ್ಣಯಕರ ಮುಂದೆ ಪ್ರದರ್ಶಿಸಿದರು. ಕಠಿಣ ತಾಲೀಮು ಹಾಗೂ ಸರಿಯಾದ ಪೋಷಣೆಯ ಮೂಲಕ ಅಭಿವೃದ್ಧಿಪಡಿಸಿದ ದೇಹದ ಕಲಾತ್ಮಕ ರೂಪದ ಪ್ರದರ್ಶನ ನೀಡಿದರು.
ತೂಕದ ಆಧಾರ ಮೇಲೆ ಒಟ್ಟು ಎಂಟು ವಿಭಾಗಗಳಲ್ಲಿ ಸರ್ಧೆಗಳು ನಡೆದವು. ಎಂಟು ವಿಭಾಗಗಳಲ್ಲೂ 1ರಿಂದ 5ನೇ ಸ್ಥಾನದವರೆಗೆ ಆಯ್ಕೆ ನಡೆದವು. ಪ್ರತಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಒಟ್ಟು 8 ದೇಹದಾರ್ಥ್ಯ ಪಟುಗಳು ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ ತೀವ್ರ ಸ್ಪರ್ಧೆ ನೀಡಿದರು.
‘ರಾಯಚೂರು ಉತ್ಸವ ಘೋಷಣೆಯಾದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ದೇಹದಾರ್ಢ್ಯಪಟುಗಳಿಗೆ ಮಾತ್ರ ‘ಮಿಸ್ಟರ್ ಕಲ್ಯಾಣ ಕರ್ನಾಟಕ’ ಸ್ಪರ್ಧೆ ಏರ್ಪಡಿಸಲು ತೀರ್ಮಾನಿಸಲಾಗಿತ್ತು. ಜನರ ಒತ್ತಾಸೆಯಿಂದಾಗಿ ರಾಜ್ಯಮಟ್ಟದ ಸ್ಪರ್ಧೆ ನಡೆಸಲು ನಿರ್ಧರಿಸಿ ಎಲ್ಲ ಜಿಲ್ಲೆಗಳ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್‌ಗಳ ಮೂಲಕ ದೇಹದಾರ್ಢ್ಯಪಟುಗಳಿಗೆ ಮಾಹಿತಿ ನೀಡಿ ಅವರು ಇಲ್ಲಿಗೆ ಬರುವಂತೆ ಮಾಡಲಾಯಿತು’ ಎಂದು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ ಹಾಗೂ ಕಾರ್ಯದರ್ಶಿ ಸುಧಾಕರ ತಿಳಿಸಿದರು.
‘ಉತ್ಸವದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಸಬೇಕು ಎನ್ನುವ ಬೇಡಿಕೆ ಬಂದಿದ್ದರಿಂದ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಬಾಡಿ ಬಿಲ್ಡಿಂಗ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಿ ಸ್ಥಳೀಯರು ಸುಲಭವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಹ ಅವಕಾಶ ಮಾಡಿಕೊಡಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೀಶ್ ಹೇಳಿದರು.
ರಾಜ್ಯದ ವಿವಿಧೆಡೆಯ 65 ದೇಹದಾರ್ಢ್ಯಪಟುಗಳು ಭಾಗವಹಿಸಿದ್ದರು. 12 ವರ್ಷದ ಬಾಲಕರು ಸಹ ಪ್ರದರ್ಶನ ನೀಡಿದರು.
ಜಿಲ್ಲಾಧಿಕಾರಿ ನಿತಿಶ್, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪ ವಿಭಾಗಾಧಿರಿ ಅಮರೇಶ ಸಜ್ಜನ್, ತಹಶೀಲ್ದಾರ್ ಸುರೇಶ ವರ್ಮಾ, ಡಿಎಚ್ಒ ಡಾ.ಸುರೇಂದ್ರ ಬಾಬು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಪವನಕುಮಾರ ಪಾಟೀಲ, ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ ಹಾನಗಲ್, ಕಾರ್ಯದರ್ಶಿ ಸುಧಾಕರ ಉಪಸ್ಥಿತರಿದ್ದರು.
ಪ್ರತಿಭಾ ಗೋನಾಳ ಪ್ರಾರ್ಥನೆ ಗೀತೆ ಹಾಡಿದರು. ದಂಡಪ್ಪ ಬಿರಾದಾರ ನಿರೂಪಿಸಿದರು.
ಆಕರ್ಷಕ ವೇದಿಕೆ
ದೇಹದಾರ್ಢ್ಯ ಸ್ಪರ್ಧೆಗಾಗಿಯೇ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 25 ಅಡಿ ಉದ್ದ 60 ಅಡಿ ಅಗಲ ಹಾಗೂ ನೆಲಮಟ್ಟದದಿಂದ ಐದು ಅಡಿ ಎತ್ತರ ವೇದಿಕೆ ನಿರ್ಮಿಸಿ ನಾಲ್ಕು ದಿಕ್ಕಿನಲ್ಲೂ ವಿದ್ಯುತ್ ಫೋಕಸ್ ದೀಪಗಳನ್ನು ಅಳವಡಿಸಲಾಗಿತ್ತು. ಏಕಕಾಲಕ್ಕೆ 20 ದೇಹದಾರ್ಢ್ಯ ಪಟುಗಳು ಪ್ರದರ್ಶನ ನೀಡುವಂತೆ ವೇದಿಕೆ ಸಜ್ಜುಗೊಳಿಸಲಾಗಿತ್ತು. ವೇದಿಕೆ ಮುಂಭಾಗದಲ್ಲಿ ನಿರ್ಣಯಕರು ಅತಿಥಿಗಳು ಹಾಗೂ ಗಣ್ಯರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಂಗಣದ ಗ್ಯಾಲರಿಯಲ್ಲೂ ಸುಲಭವಾಗಿ ವೀಕ್ಷಿಸಬಹುದಾದ್ದರಿಂದ ಭಾರಿ ಸಂಖ್ಯೆಯಲ್ಲಿ ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.