ADVERTISEMENT

ಸಮಾಜ ಅಭಿವೃದ್ಧಿಗೆ ಅಗತ್ಯ ನೆರವು: ಶಾಸಕ ಶಿವರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 10:42 IST
Last Updated 28 ಜನವರಿ 2020, 10:42 IST
ರಾಯಚೂರಿನ ಹರಿಜನವಾಡಾ ಸಮುದಾಯ ಭವನದಲ್ಲಿ ನವರತ್ನ ಯುವಕ ಸಂಘದಿಂದ ಗಣರಾಜ್ಯೋತ್ಸವ ದಿನದಂದು ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರಿವಿಸಲಾಯಿತು
ರಾಯಚೂರಿನ ಹರಿಜನವಾಡಾ ಸಮುದಾಯ ಭವನದಲ್ಲಿ ನವರತ್ನ ಯುವಕ ಸಂಘದಿಂದ ಗಣರಾಜ್ಯೋತ್ಸವ ದಿನದಂದು ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರಿವಿಸಲಾಯಿತು   

ರಾಯಚೂರು: ಮಾದಿಗ ಸಮಾಜ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ನಗರದ ಹರಿಜನವಾಡದ ಸಮುದಾಯ ಭವನದಲ್ಲಿ ಗಣರಾಜ್ಯೋತ್ಸವ ದಿನದಂದು ನವರತ್ನ ಯುವಕ ಸಂಘದಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಿಎಚ್‌ಡಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಸಾವಿತ್ರಿಭಾಯಿ ಫುಲೆ ಅವರಂತಹ ಮಹನೀಯರ ಹೋರಾಟದ ಫಲವಾಗಿ ಸಮದಾಯದ ಮಕ್ಕಳು ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುತ್ತಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಮಾತನಾಡಿ, ಜನರೊಂದಿಗೆ ಒಳ್ಳೆಯ ಒಡನಾಟ ಉಳಿಸಿಕೊಂಡು ಬಂದಿರುವ ಸಂಘವು ಒಬ್ಬರನ್ನು ನಗರಸಭೆ ಸದಸ್ಯರನ್ನಾಗಿ ಆಯ್ಕೆ ಮಾಡುವಷ್ಟು ಶಕ್ತವಾಗಿರುವುದು ಗಮನಾರ್ಹ ಎಂದರು.

ಶಿಕ್ಷಣದಿಂದ ಉದ್ಯೋಗ ಹಾಗೂ ಬದುಕಿಗೆ ಮಾತ್ರ ಎನ್ನುವುದಕ್ಕೆ ಸಿಮೀತ ಮಾಡಿಕೊಳ್ಳಬಾರದು. ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡಬೇಕು ಎಂದು ತಿಳಿಸಿದರು.

86 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಪಿಎಚ್‌ಡಿ ಪಡೆದಿರುವ ಡಾ.ಜೆ.ಎಲ್‌.ಈರಣ್ಣ, ಡಾ.ಜೆ.ಎಂ.ಶಿಲ್ಪ, ಡಾ.ಶ್ರೀನಿವಾಸ, ಡಾ.ಮಲ್ಲಯ್ಯ ಅತ್ತನೂರು ಹಾಗೂ ಪಿಎಸ್‌ಐ ಹುದ್ದೆಗೆ ನೇಮಕಗೊಂಡ ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಲತಾ ಸತೀಶ, ನಗರಸಭೆ ಸದಸ್ಯ ಎನ್‌.ಕೆ.ನಾಗರಾಜ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್‌, ಪಿ. ಯಲ್ಲಪ್ಪ, ಜಿ.ಎನ್‌. ಪ್ರಕಾಶ, ರೆಡ್ಡಿ ತಿಮ್ಮಯ್ಯ, ಮಾದಿಗ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಧು ಚಕ್ರವರ್ತಿ, ಜ್ಞಾನಗಂಗಾ ಪಪೂ ಕಾಲೇಜಿನ ಪ್ರಾಂಶುಪಾಲ ರಾಜಾ ಶ್ರೀನಿವಾಸ್‌, ಎಂಆರ್‌ಎಚ್‌ಎಸ್‌ ಮುಖಂಡ ಪಿ.ಅಮರೇಶ ಇದ್ದರು. ರಂಗನಿರ್ದೇಶಕ ಡಿಂಗ್ರಿ ನರೇಶ ನಿರೂಪಿಸಿದರು. ಎಸ್‌.ಹುಲಿಗೆಪ್ಪ ಸ್ವಾಗತಿಸಿದರು. ಜನಾರ್ದನ ಹಳ್ಳಿಬೆಂಚಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.