ಗಬ್ಬೂರು (ದೇವದುರ್ಗ): ‘ಬೆಳೆ ಉಳಿದರೆ ರೈತರು ಉಳಿಯುತ್ತಾರೆ. ರೈತರ ರಕ್ಷಣೆಗಾಗಿ ಪಾದಯಾತ್ರೆ ಮಾಡಲಾಗಿದೆ’ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 15 ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಗಬ್ಬೂರು ಗ್ರಾಮದಿಂದ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿವರೆಗೆ ಬುಧವಾರ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಮಾತನಾಡಿದರು.
‘ರೈತಪರ ಸರ್ಕಾರ ಎಂದು ಜಂಭ ಕೊಚ್ಚಿಕೊಳ್ಳುವ ಸರ್ಕಾರ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ನೀಡುತ್ತಿಲ್ಲ. ಅಷ್ಟೋ ಇಷ್ಟೋ ಹೊಲದಲ್ಲಿ ಬೆಳೆದಿರುವ ಬೆಳೆಗೆ ನೀರು ಒದಗಿಸುತ್ತಿಲ್ಲ. ನಮ್ಮ ಭಾಗದ ಜಲಾಶಯದ ನೀರಿಗೆ ನಾವೇ ಸರ್ಕಾರದ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ’ ಎಂದರು.
‘ಜಿಲ್ಲೆಯಾದ್ಯಂತ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ, ಸಜ್ಜೆ, ಶೇಂಗಾ ಮತ್ತು ಜೋಳ ಬೆಳೆದಿದ್ದಾರೆ. ಎಲ್ಲ ಬೆಳೆಗಳಿಗೆ ಕನಿಷ್ಠ 15 ದಿನ ನೀರಿನ ಅವಶ್ಯಕತೆ ಇದೆ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು. ಅಗತ್ಯವಿದ್ದರೆ ಐಸಿಸಿ ಸಭೆ ಕರೆದು ನಿರ್ಧಾರ ಕೈಗೊಂಡು ನೀರು ಹರಿಸಲು ಕ್ರಮ ವಹಿಸಬೇಕು’ ಎಂದು ಹೇಳಿದರು.
ಗಬ್ಬೂರು ಗ್ರಾಮದಿಂದ ಪ್ರಾರಂಭವಾದ ಮೊದಲ ದಿನದ ಪಾದಯಾತ್ರೆ, ರಾಯಚೂರು ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಸಾಥ್ ಮೈಲು ಕ್ರಾಸ್ ತಲುಪಿದೆ. ಗುರುವಾರ ಸಾಥ್ ಮೈಲು ಕ್ರಾಸ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.
ಜಿ.ಪಂ ಮಾಜಿ ಸದಸ್ಯ ಶರಬಣ್ಣ ಸಾಹು, ಜೆಡಿಎಸ್ ಮುಖಂಡರಾದ ಸಿದ್ದಣ್ಣ ತಾತಾ, ಸಿದ್ದನಗೌಡ ಮೂಡಲಗುಂಡ, ಶರಣಪ್ಪ ಬಳೆ, ರೇಣುಕಾ ಮಯೂರಸ್ವಾಮಿ, ಸಿದ್ದಣ್ಣ ಬಿ.ಗಣೇಕಲ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋವಿಂದರಾಜ ನಾಯಕ, ವಿಜಯಲಕ್ಷ್ಮೀ, ತಿಮ್ಮಾರೆಡ್ಡಿ ಜಾಗಟಕಲ್, ಸಿ.ಎಸ್.ಪಾಟೀಲ, ಶರಣಗೌಡ ಸುಂಕೇಶ್ವರಹಾಳ, ನಿಂಗಪ್ಪ ಮಲದಕಲ್, ಪ್ರಭು ದೊರೆ, ಮೆಹಬೂಬ್ ಹೆಗ್ಗಡದಿನ್ನಿ, ನಾಗರಾಜ ಪಾಟೀಲ, ಶಿವನಗೌಡ, ಬಸವರಾಜ ಯರಮಸಾಳ, ಕುಪ್ಪಯ್ಯ ಆಲ್ಕೋಡ ಸೇರಿ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.