ಸಭೆಯಲ್ಲಿ ಶಾಸಕಿ ಕರೆಮ್ಮ ನಾಯಕ ಧರಣಿ
– ಪ್ರಜಾವಾಣಿ ಚಿತ್ರ
ರಾಯಚೂರು: ‘ದೇವದುರ್ಗ ಕ್ಷೇತ್ರದ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಪರಿಹಾರ ದೊರಕಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೂ ನಾನು ಆಸನದ ಮೇಲೆ ಕುಳಿತುಕೊಳ್ಳುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ಶಾಸಕಿ ಕರೆಮ್ಮ ನಾಯಕ ನೆಲದ ಮೇಲೆ ಕುಳಿತು ಧರಣಿ ನಡೆಸಿದರು.
ರಾಯಚೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ದೇವದುರ್ಗ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ. 33 ಪಿಡಿಒಗಳನ್ನು ಅಮಾನತು ಮಾಡಿದ ನಂತರ ಕೇವಲ 6 ಪಿಡಿಒ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಬೇರೆ ಪಿಡಿಒಗಳ ನೇಮಕ ಮಾಡಿಲ್ಲ. ಪರ್ಯಾಯ ವ್ಯವಸ್ಥೆಯನ್ನೂ ಮಾಡಿಲ್ಲ. 40 ಕಿ.ಮೀ ಅಂತರದಲ್ಲಿ ಎರಡು ಟೋಲ್ ನಿರ್ಮಿಸಿ ಹಣ ವಸೂಲಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ದಬ್ಬಾಳಿಕೆ ಹೆಚ್ಚಾಗಿದೆ’ ಎಂದು ದೂರಿದರು.
‘ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಅಕ್ರಮ ಅಕ್ಕಿ, ಸಾಗಾಟ, ಅಕ್ರಮ ನಿವೇಶನಗಳ ಮಾರಾಟ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಪ್ರಜಾವಾಣಿಯಲ್ಲಿ ವಿವರವಾದ ವರದಿಗಳು ಬಂದರೂ ಈ ಬಗ್ಗೆ ಏಕೆ ತನಿಖೆ ನಡೆಯುತ್ತಿಲ್ಲ. ಶಾಸಕಿಯಿಂದ ಜೀವಭಯವಿದೆ ಎಂದು 60 ಪೊಲೀಸರು ಪತ್ರಕೊಟ್ಟರೆ ಮೂರು ದಿನಗಳಲ್ಲೇ ತನಿಖೆ ನಡೆಯುತ್ತದೆ. ಬೇರೆಲ್ಲ ಅಕ್ರಮ ನಡೆದರೂ ತನಿಖೆ ನಡೆಸಲು ತಾರತಮ್ಯ ಏಕೆ’ ಎಂದು ಪ್ರಶ್ನಿಸಿದರು.
‘ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರು 60 ಕಿ.ಮೀ ಅಂತರದಲ್ಲಿ ಎರಡು ಟೋಲ್ ಇರಬಾರದು ಎಂದು ಹೇಳಿದ್ದಾರೆ. ಆದರೆ, ದೇವದುರ್ಗದಲ್ಲಿ 40 ಕಿ.ಮೀ ಅಂತರದಲ್ಲಿ ಎರಡು ಟೋಲ್‌ಗಳಿವೆ. ಇದನ್ನು ಪ್ರಶ್ನಿಸಿದ ನನ್ನ ಕುಟುಂಬದವರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಟೋಲ್ ಸಂಗ್ರಹ ಕೇಂದ್ರ ರದ್ದಾಗಬೇಕು’ ಎಂದು ಪಟ್ಟು ಹಿಡಿದರು.
‘ನನಗೆ ನ್ಯಾಯ ಸಿಗದಿದ್ದರೆ ಸಭೆಯಿಂದ ನಿರ್ಗಮಿಸುವುದಿಲ್ಲ‘ ಎಂದರು. ಇದರಿಂದ ಕೆಲ ಸಮಯ ಸಭೆಯಲ್ಲಿ ಗೊಂದಲ ಉಂಟಾಯಿತು.
ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸಿ ಲೋಕೋಪಯೋಗಿ ಸಚಿವರೊಂದಿಗೆ ಸಭೆ ನಡೆಸುವವರೆಗೂ ತಾತ್ಕಾಲಿಕವಾಗಿ ಟೋಲ್ ಸಂಗ್ರಹ ತಡೆಯಲು ಕ್ರಮಕೈಗೊಳ್ಳಬೇಕು‘ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ನಂತರ ಕರೆಮ್ಮ ಧರಣಿ ಅಂತ್ಯಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.