
ಲಿಂಗಸುಗೂರು: ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ವಿದಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅವರ ಪಿಎ ಚೆನ್ನಾರೆಡ್ಡಿ ಬಿರಾದಾರ ನನಗೆ ₹ 50 ಲಕ್ಷ ರೂಪಾಯಿ ಆಫರ್ ನೀಡಿದ್ದರು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶರಣಗೌಡ ಬಯ್ಯಾಪುರ ಕಾಂಗ್ರೆಸ್‌ನಿಂದ ಎಂಎಲ್ಸಿಯಾಗಿದ್ದರೂ ಕೂಡಾ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿ.ಎಸ್.ಹೂಲಗೇರಿ ಅವರ ವಿರುದ್ಧ ರುದ್ರಯ್ಯ ಅವರನ್ನು ಕೆಆರ್‌ಪಿ ಪಕ್ಷದಿಂದ ಸ್ಪರ್ಧಿಸುವಂತೆ ಮಾಡಿ ಅವರ ಆಪ್ತ ಸಹಾಯಕ ಚೆನ್ನಾರೆಡ್ಡಿ ಬಿರಾದಾರ ಮೂಲಕ ನಾಲ್ಕು ಜನ ಕಾಂಗ್ರೆಸ್ ಪುರಸಭೆ ಸದಸ್ಯರನ್ನು ಹಾಗೂ ಕೆಲ ಮುಖಂಡರನ್ನು ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿ ಹೂಲಗೇರಿ ಅವರನ್ನು ಸೋಲುವಂತೆ ಮಾಡಿದರು’ ಎಂದು ಆರೋಪಿಸಿದರು.
‘ಆಗ ಬಿಜೆಪಿಯಲ್ಲಿದ್ದರೂ ತಟಸ್ಥಾಗಿದ್ದ ನನಗೆ ಕಾಂಗ್ರೆಸ್ ಸೇರಬೇಡಿ ಕೆಆರ್ ಪಿ ಪಕ್ಷಕ್ಕೆ ಸೇರ್ಪಡೆಯಾದರೆ 50 ಲಕ್ಷ ರೂಪಾಯಿ ಕೊಡಿಸುವುದಾಗಿ ಆಫರ್ ನೀಡಿದ್ದರು. ನನಗೆ ಆಫರ್ ನೀಡಿಲ್ಲ ಎನ್ನುವುದಾಗಿ ಅವರು ನಂಬುವ ದೇವರ ಗುಡಿ ಹೋಗೋಣ ನಾನು ಪ್ರಮಾಣ ಮಾಡ್ತೀನಿ, ಅವರು ಮಾಡ್ತಾರಾ ಕೇಳೋಣ’ ಎಂದರು.
‘ಮಾಜಿ ಶಾಸಕ ಡಿ.ಎಸ್.ಹೂಲಗೇರಿ ನನ್ನನ್ನು ಕರೆದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಬಿಜೆಪಿಯಿಂದ ಬಂದ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದು ಸಹಿಸಲು ಆಗದ ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ ಅವರು ನನ್ನ ಹಾಗೂ ಹೂಲಗೇರಿ ಅವರ ಬಗ್ಗೆ ಆಪಾದನೆ ಮಾಡುತ್ತಿರುವುದು ಬಿಡಬೇಕು. ಕುಷ್ಟಗಿಯಲ್ಲಿ ಆರ್‌ಎಸ್‌ಎಸ್, ಬಿಜೆಪಿಯ ಮುಖಂಡನನ್ನು ಕಾಂಗ್ರೆಸ್‌ಗೆ ಕರೆತಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಡಿದ್ದು ಯಾರು ಎಂಬುದು ಅಮರೇಗೌಡ ಬಯ್ಯಾಪುರ ಸ್ಪಷ್ಟಪಡಿಸಬೇಕು’ ಎಂದರು.
ಗೋಷ್ಠಿಯಲ್ಲಿ ಎಪಿಎಂಸಿ ಅದ್ಯಕ್ಷ ಅಮರೇಶ ಹಿರೇಹೆಸರೂರು, ಮಹ್ಮದ ರಫಿ, ಮುದಕಪ್ಪ ನೀರಲಕೇರಾ, ಉಮೇಶ ಹುನಕುಂಟಿ, ಸಂಗಮೇಶ ನಾಯಕ, ನೀಲಪ್ಪ ಪವಾರ, ಜೀವನಗೌಡ ಬಾಳೇಗೌಡ, ಖಾಜಾಹುಸೇನ್ ಪೂಲವಾಲೆ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.