ADVERTISEMENT

Fire Station: ಮುದಗಲ್‌ಗೆ ಬೇಕಿದೆ ಅಗ್ನಿಶಾಮಕ ಠಾಣೆ

ಲಿಂಗಸುಗೂರು, ಮಸ್ಕಿ ತಾಲ್ಲೂಕುಗಳ ನಡುವೆ ಒಂದೇ ಠಾಣೆ

ಡಾ.ಶರಣಪ್ಪ ಆನೆಹೊಸೂರು
Published 3 ಮಾರ್ಚ್ 2025, 6:17 IST
Last Updated 3 ಮಾರ್ಚ್ 2025, 6:17 IST
ಮುದಗಲ್ ಸಮೀಪದ ಬಯ್ಯಾಪುರ ಗ್ರಾಮದಲ್ಲಿ ಈಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಸ್ಮವಾದ ಮೇವಿನ ಬಣವಿ
ಮುದಗಲ್ ಸಮೀಪದ ಬಯ್ಯಾಪುರ ಗ್ರಾಮದಲ್ಲಿ ಈಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಸ್ಮವಾದ ಮೇವಿನ ಬಣವಿ   

ಮುದಗಲ್: ಹೋಬಳಿಯಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಹೆಚ್ಚಾಗಿ, ಬೋರ್‌ವೆಲ್‌ಗಳಲ್ಲಿ ನೀರು ನಿಂತು ತೋಟಗಾರಿಕಾ ಬೆಳೆಗಳು ಒಣಗುತ್ತಿರುವುದು ಒಂದೆಡೆಯಾದರೆ, ಅಗ್ನಿ ಅವಘಡದಿಂದ ಬೆಳೆ, ಸಂಗ್ರಹಿಸಿಟ್ಟ ಮೇವು ಹಾನಿಯಾಗುತ್ತಿರುವುದಕ್ಕೆ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿಯ ದೊಡ್ಡ ಹೋಬಳಿಯಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪಿಸಬೇಕು ಎನ್ನುವುದು ಜನರ ಒತ್ತಾಯ.

ಹೋಬಳಿಯ ಕೊನೆ ಗ್ರಾಮಗಳು ಲಿಂಗಸುಗೂರು ತಾಲ್ಲೂಕು ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿವೆ. ಗಡಿ ಗ್ರಾಮಗಳಾದ ಅಂಕನಾಳ-ಉಪನಾಳ, ತೊಂಡಿಹಾಳ, ಹಲ್ಕಾವಟಗಿ, ರಾಮತನಾಳ, ಬ್ಯಾಲಿಹಾಳ, ಬೆಳ್ಳಿಹಾಳ, ತೊಡಕಿ, ಕುಮಾರಖೇಡ ಗ್ರಾಮಗಳು ಇನ್ನೂ ದೂರ.

ಹೋಬಳಿಯ ಯಾವುದಾದರೂ ಗ್ರಾಮದಲ್ಲಿ ಬೆಂಕಿ ಅವಘಡಗಳು ನಡೆದಾಗ ದೂರದ ಲಿಂಗಸುಗೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಅಲ್ಲಿಗೆ ಹೋಗಲು ಕನಿಷ್ಠ ಒಂದೂವರೆಯಿಂದ ಎರಡು ಗಂಟೆ ಬೇಕಾಗುತ್ತದೆ. ಅವರು ಬರುವುದರಲ್ಲಿಯೇ ಹೆಚ್ಚಿನ ಹಾನಿ ಸಂಭವಿಸುವುದು ಸಾಮಾನ್ಯವಾಗಿದೆ.

ADVERTISEMENT

ಮುದಗಲ್ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವಂತೆ ಹಲವು ವರ್ಷದಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಜನರು ಹೈರಾಣಾಗಿದ್ದಾರೆ. ತಾಲ್ಲೂಕಿನಲ್ಲಿ ಹಳ್ಳಿ, ಪಟ್ಟಣ, ದೊಡ್ಡಿ, ತಾಂಡಾ ಸೇರಿ 330 ಹಳ್ಳಿಗಳು ಇವೆ. ಇದರ ಜತೆ ಮಸ್ಕಿ ತಾಲ್ಲೂಕಿನಲ್ಲಿ ಎಲ್ಲಿಯೇ ಅಗ್ನಿ ಅವಘಡಗಳು ಸಂಭವಿಸಿದರೂ ಲಿಂಗಸುಗೂರು ಅಗ್ನಿಶಾಮಕ ಠಾಣೆಯಿಂದಲೇ ವಾಹನ ಅಲ್ಲಿಗೆ ಹೋಗಬೇಕು. ದೂರವಾಣಿ ಕರೆ ಬಂದರೆ ಅವರು ಅಗ್ನಿ ಅವಘಡ ಸ್ಥಳಕ್ಕೆ ತೆರಳಲು ಸಾಕಷ್ಟು ಸಮಯ ಬೇಕಾಗುತ್ತದೆ.

ಲಿಂಗಸುಗೂರು ಅಗ್ನಿಶಾಮಕ ಠಾಣೆಯಲ್ಲಿ ಎರಡು ಬೆಂಕಿ ನಂದಿಸುವ ಜಲ ವಾಹನಗಳಿವೆ. ಅದರಲ್ಲಿ ಒಂದಕ್ಕೆ 15 ವರ್ಷವಾಗಿದ್ದರಿಂದ ಉಪಯೋಗಕ್ಕೆ ಬರುತ್ತಿಲ್ಲ. ಈಗ ಇದ್ದ 4,500 ಲೀಟರ್‌ ಸಂಗ್ರಹ ಸಾಮರ್ಥ್ಯದ ಜಲವಾಹನಕ್ಕೆ 14 ವರ್ಷಗಳು ತುಂಬಿವೆ. ಕೆಲವೇ ದಿನಗಳಲ್ಲಿ ಸರಣಿಯಂತೆ ವಾಹನಗಳು ಸ್ಥಗಿತಗೊಳ್ಳಲಿದ್ದು, ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ.

ಬೇಸಿಗೆ ಆರಂಭದಲ್ಲೇ ತಾಲ್ಲೂಕಿನಲ್ಲಿ 33 ಕಡೆ ಬೆಂಕಿ ಅವಘಡ ಸಂಭವಿಸಿವೆ. ತ್ವರಿತ ಕಾರ್ಯಾಚರಣೆಗೆ ಜಲ ವಾಹನದ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಮುದಗಲ್‌ನಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಬದ್ಧರಾಗಬೇಕು ಎಂಬುದು ಹೋಬಳಿಯ ಜನರ ಒತ್ತಾಯ.

ಮುದಗಲ್ ಹೋಬಳಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವಂತೆ ಹಲವು ಬಾರಿ ಜನಪ್ರತಿನಿಧಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ
ಬಸವರಾಜ ಬಂಕದಮನಿ, ಡಿಎಸ್‌ಎಸ್ ಮುಖಂಡ
ಲಿಂಗಸುಗೂರು ಮತ್ತು ಮಸ್ಕಿ ತಾಲ್ಲೂಕಿನ ನಡುವೆ ಒಂದೇ ಜಲವಾಹನ ಇದೆ. ಇನ್ನೊಂದು ವಾಹನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ
ಹೊನ್ನಪ್ಪ, ಅಗ್ನಿಶಾಮಕ ಠಾಣಾಧಿಕಾರಿ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.