ADVERTISEMENT

ಪುರಸಭೆ ಚುನಾವಣೆ: ಮುಖಂಡರ ಸಭೆ, ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:25 IST
Last Updated 1 ಡಿಸೆಂಬರ್ 2021, 6:25 IST
ಪುರಸಭೆ
ಪುರಸಭೆ   

ಮಸ್ಕಿ: ಡಿ. 27ರಂದು ಪುರಸಭೆ ಚುನಾವಣೆ ನಡೆಯುವ ಕಾರಣ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು, ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿವೆ. ಬುಧವಾರ ಸರಣಿ ಸಭೆಗಳನ್ನು ನಡೆಸಿವೆ.

ಇಲ್ಲಿನ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ನೇತೃತ್ವದಲ್ಲಿ ಮುಖಂಡರು ಹಾಗೂ ವಾರ್ಡ್‌ವಾರು ಆಕಾಂಕ್ಷಿಗಳ ಸಭೆ ನಡೆಯಿತು.

ADVERTISEMENT

‘ಬಿಜೆಪಿ ಎಲ್ಲ ಕೋನಗಳಿಂದಲೂ ಚಿಂತಿಸಿ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ’ ಎಂದು ಪಕ್ಷದ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ತಿಳಿಸಿದರು.

ಶಾಸಕ ಆರ್.ಬಸನಗೌಡ ಹಾಗೂ ಪಕ್ಷದ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಅವರ ನೇತೃತ್ವದಲ್ಲಿ ಗುಪ್ತ ಸ್ಥಳದಲ್ಲಿ ಕಾಂಗ್ರೆಸ್‌ ಪಕ್ಷ ಮುಖಂಡರು, ಆಕಾಂಕ್ಷಿಗಳ ಸಭೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

‘ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ಗೆ ಪುರಸಭೆ ಚುನಾವಣೆಯಲ್ಲಿ ಗೆಲುವು ಖಚಿತ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ವಾರ್ಡ್‌ವಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಾಂಗ್ರೆಸ್‌ಗೆ ಸುಲಭವಲ್ಲ ಎನ್ನಲಾಗುತ್ತಿದೆ.

ಕಬ್ಬಿಣದ ಕಡಲೆ: ಪುರಸಭೆ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಎರಡು ಪಕ್ಷಗಳಿಗೂ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಪ್ರತಿ ವಾರ್ಡ್‌ನಿಂದ ಒಂದೊಂದು ಪಕ್ಷದಲ್ಲಿ 5 ರಿಂದ 6 ಜನ ಆಕಾಂಕ್ಷಿಗಳಿದ್ದಾರೆ. ಎರಡು ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟುವ ಲಕ್ಷಣಗಳು ಹೆಚ್ಚಾಗಿವೆ. ಪಕ್ಷದ ಮುಖಂಡರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಜೆಡಿಎಸ್ ಅಖಾಡಕ್ಕೆ: ಈ ನಡುವೆ ಎರಡೂ ಪಕ್ಷಗಳ ಬಂಡಾಯದ ಲಾಭ ಪಡೆಯಲು ಜೆಡಿಎಸ್‌ ಕಾದು ಕುಳಿತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.