ADVERTISEMENT

ಮುನಿರಾಬಾದ್ | ಸಿಹಿ ನೀರಿನ ಹಳ್ಳದ ಸ್ವಚ್ಛತೆ

ಶಹಾಪುರ ಗ್ರಾಮಸ್ಥರ ಪರಿಸರ ಪ್ರಜ್ಞೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 4:22 IST
Last Updated 5 ಜೂನ್ 2020, 4:22 IST
ಮುನಿರಾಬಾದ್ ಸಮೀಪದ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಾಪುರ ಗ್ರಾಮಸ್ಥರು ಗುರುವಾರ ಸಿಹಿನೀರಿನ ಹಳ್ಳವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು
ಮುನಿರಾಬಾದ್ ಸಮೀಪದ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಾಪುರ ಗ್ರಾಮಸ್ಥರು ಗುರುವಾರ ಸಿಹಿನೀರಿನ ಹಳ್ಳವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು   

ಮುನಿರಾಬಾದ್: ಸಮೀಪದ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಾಪುರ ಗ್ರಾಮಸ್ಥರು ಗ್ರಾಮಕ್ಕೆ ನೀರಿನ ಆಸರೆ ಒದಗಿಸಿರುವ ಸಿಹಿ ನೀರಿನ ಹಳ್ಳವನ್ನು ಸ್ವಚ್ಛಗೊಳಿಸಿ ನೀರಿನ ಹರಿವನ್ನು ಹೆಚ್ಚಿಸುವ ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕೊರವರ್, ಮನರೇಗಾ ಯೋಜನೆಯ ಅಡಿ ಇದಕ್ಕೂ ಮುಂಚೆ ಕೆರೆಯ ಹೂಳನ್ನು ಎತ್ತಿಸಲಾಗಿದೆ. ಕೆರೆಗೆ ನೀರಿನ ಮೂಲವಾಗಿರುವ ಹಳ್ಳ ಜಾಲಿ, ಕಳೆ ಗಿಡಗಳಿಂದ ತುಂಬಿ ನೀರು ಸರಾಗವಾಗಿ ಹರಿಯದಂತಾಗಿತ್ತು. ಗ್ರಾಮಸ್ಥರ ಮತ್ತು ರೈತರ ಮನವಿಯ ಮೇರೆಗೆ ಹಳ್ಳ ಸ್ವಚ್ಛಗೊಳಿಸುವ ಕೆಲಸ ಕೈಗೊಂಡಿದ್ದೇವೆ. ಸುಮಾರು 375ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಜಂಗಲ್‍ಕಟಿಂಗ್, ಹಳ್ಳದ ಹೂಳು ತೆಗೆಯುವಲ್ಲಿ ನಿರತರಾಗಿದ್ದಾರೆ ಎಂದರು.

ಗ್ರಾಮದ ಸಮಾಜ ಸೇವಕ ಈರಣ್ಣ ಕೋಮಲಾಪುರ ಮಾತನಾಡಿ, ಗ್ರಾಮಕ್ಕೆ ನೀರಿನ ಮೂಲವಾಗಿರುವ ಸಿಹಿ ನೀರಿನ ಹಳ್ಳ ಮತ್ತು ಕೆರೆ ಕೆಲವು ಭಾಗದಲ್ಲಿ ಒತ್ತುವರಿಯಾಗಿದೆ. ಒತ್ತುವರಿ ತೆರವು ಮಾಡಿ ಹಳ್ಳದಲ್ಲಿ ನೀರು ಹರಿದರೆ ಅಕ್ಕಪಕ್ಕದ ರೈತರ ಕೊಳವೆಬಾವಿಗಳಿಗೆ ನೀರು ಸಿಗುತ್ತದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ.

ADVERTISEMENT

ಹಳ್ಳದ ದಂಡೆಯಲ್ಲಿ ಗಿಡ– ಮರ ಬೆಳೆಸಿದರೆ ಪಶು, ಪಕ್ಷಿ ಪ್ರಾಣಿಗಳಿಗೆ ಆಹಾರ ನೀಡಿದಂತಾಗುತ್ತದೆ. ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ಕೆಲಸ ಆರಂಭಿಸಲಾಗಿದ್ದು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಬಸವರಾಜ ಕೊರವರ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಟಿ.ವೆಂಕೋಬಪ್ಪ, ಪಿಡಿಒ ಗೀತಾಕುಮಾರಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.