ADVERTISEMENT

ಉಪ ಚುನಾವಣೆ ಎದುರು ನೋಡುತ್ತಿರುವ ಮಸ್ಕಿಯಲ್ಲೂ ರಾಜಕೀಯ ಚಟುವಟಿಕೆ ಚುರುಕು

ಕಾಂಗ್ರೆಸ್‌, ಬಿಜೆಪಿ ಕಚೇರಿಗಳಲ್ಲಿ ನಿರಂತರ ಮುಖಂಡರ ಸಭೆ

ನಾಗರಾಜ ಚಿನಗುಂಡಿ
Published 4 ಅಕ್ಟೋಬರ್ 2020, 3:38 IST
Last Updated 4 ಅಕ್ಟೋಬರ್ 2020, 3:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಲು ದಾರಿ ಸುಗಮವಾಗುತ್ತಿದ್ದಂತೆ, ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.

ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಾಲ್ಲೂಕು ಕಾಂಗ್ರೆಸ್‌ ಮತ್ತು ತಾಲ್ಲೂಕು ಬಿಜೆಪಿ ಕಚೇರಿಗಳಿಗೆ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿದಿನ ಸೇರುತ್ತಿ ದ್ದಾರೆ. ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ಸಭೆಗಳನ್ನು ನಡೆಸುತ್ತಿರುವ ಪದಾಧಿಕಾರಿಗಳು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಅಧಿಕೃತವಾಗಿ ಚುನಾವಣೆ ಘೋಷಣೆ ಆಗದಿದ್ದರೂ ಚುನಾವಣೆ ಸಂದರ್ಭದಲ್ಲಿ ನಡೆಯುವ ಕಾರ್ಯಯೋಜನೆಗಳು ಸಾಕಷ್ಟು ಪೂರ್ವದಲ್ಲಿಯೇ ಶುರುವಾಗಿವೆ.

ಬಿಜೆಪಿ ಮುಖಂಡ ಪ್ರತಾಪಗೌಡ ಪಾಟೀಲ ಅವರು, ಕ್ಷೇತ್ರದಾದ್ಯಂತ ಇರುವ ಬೆಂಬಲಿಗರು, ಮುಖಂಡರುಗಳನ್ನು ಪಕ್ಷದ ಕಚೇರಿಗೆ ಆಹ್ವಾನಿಸಿ ಸಭೆ ನಡೆಸಿದ್ದಾರೆ. ಉಪಚುನಾವಣೆ ಎದುರಿಸುವುದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿಯೂ ತಾಲ್ಲೂಕು ಪದಾಧಿಕಾರಿಗಳು ಸಭೆ ಸೇರಿ, ಪಕ್ಷದ ಸಂಘಟನೆಗಾಗಿ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿರುವುದು ಗಮನ ಸೆಳೆಯುತ್ತಿದೆ.

ADVERTISEMENT

ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಅವರು ಸ್ಪರ್ಧಿಸುವುದು ನಿಚ್ಚಳ. ಆದರೆ, ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಲ್ಲಿಯೂ ಇದೆ. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ರೀತಿಯಲ್ಲಿಯೆ ಕಾಂಗ್ರೆಸ್‌–ಬಿಜೆಪಿ ಮಧ್ಯೆ ಪೈಪೋಟಿ ಏರ್ಪಡುವ ಲಕ್ಷಣಗಳು ಕಾಣುತ್ತಿವೆ. ಆದರೆ, ಹಿಂದಿನ ಚುನಾವಣೆಯಲ್ಲಿ ಪೈಪೋಟಿ ನಡೆಸಿದ್ದ ಪ್ರತಾಪಗೌಡ ಪಾಟೀಲ ಮತ್ತು ಬಸನಗೌಡ ತುರ್ವಿಹಾಳ ಅವರು ಈಗ ಒಂದೇ ಪಕ್ಷದಲ್ಲಿದ್ದಾರೆ. ಹೀಗಾಗಿ ಪೈಪೋಟಿ ನಡೆಸಲು ಕಾಂಗ್ರೆಸ್‌ನಿಂದ ಯಾರು ಪ್ರಬಲ ಅಭ್ಯರ್ಥಿ ಆಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಗುಪ್ತವಾಗಿದೆ.

‘ತುಂಗಭದ್ರಾ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೇನೆ. ಬಿಜೆಪಿ ಯಲ್ಲಿಯೇ ಇದ್ದೇನೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಬಸನಗೌಡ ತುರ್ವಿಹಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಸ್ಕಿ ವಿಧಾನಸಭೆ ಕ್ಷೇತ್ರವು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಮೀಸಲಾಗಿದೆ. ಕಾಂಗ್ರೆಸ್‌ನಿಂದ ರಾಜ್ಯಮಟ್ಟದ ನಾಯಕ ರೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಜೋರಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.