ADVERTISEMENT

ಅವಹೇಳನಕಾರಿ ಹೇಳಿಕೆ: ಮುಸ್ಲಿಮರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 13:34 IST
Last Updated 26 ಆಗಸ್ಟ್ 2022, 13:34 IST
ರಾಯಚೂರು ಮುಸ್ಲಿಂ ಪೋರಮ್ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ರಾಯಚೂರು ಮುಸ್ಲಿಂ ಪೋರಮ್ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.   

ರಾಯಚೂರು: ತೆಲಂಗಾಣದ ಹೈದರಾಬಾದ್‌ನಲ್ಲಿ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ರಾಯಚೂರು ಮುಸ್ಲಿಂ ಪೋರಮ್ ನೇತೃತ್ವದಲ್ಲಿ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಗೆ ದಲಿತಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ನೀಡಿದರು. ಈಚೆಗೆ ದೇಶದಲ್ಲಿ ಕೋಮು ಪ್ರಚೋದನೆ ಹೇಳಿಕೆಗಳನ್ನು ನೀಡಿ ಕೋಮು ಸೌಹಾರ್ಧಕ್ಕೆ ನಿರಂತರವಾಗಿ ಧಕ್ಕೆ ತರಲಾಗುತ್ತಿದೆ. ಇದಕ್ಕೆ ಕೇಂದ್ರ ಹಾಗೂ ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಸರ್ಕಾರದ ಬೆಂಬಲವಿದೆ.

ಬಿಜೆಪಿ ಪಕ್ಷದ ಅನೇಕ ನಾಯಕರು, ಚುನಾಯಿತ ಪ್ರತಿನಿಧಿಗಳು ಮತ್ತು ಪಕ್ಷದ ವಕ್ತಾರರು ಅನೇಕ ಕೋಮು ಪ್ರಚೋದಿತ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿರುವುದು ಖಂಡನೀಯ. ಈಚೆಗೆ ಹೈದರಾಬಾದ್ ನಲ್ಲಿ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಪ್ರವಾದಿ ಕುರಿತು ಅವಹೇಳನಕಾರಿ ಮಾತನಾಡಿದ್ದು ಇಸ್ಲಾಂ ಧರ್ಮದ ಅನುಯಾಯಿಗಳಿಗೆ, ಮುಖಂಡರಿಗೆ ನೋವುಂಟಾಗಿದೆ ಎಂದು ದೂರಿದರು.

ADVERTISEMENT

ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಏನು ಮಾತನಾಡಬೇಕು ಎನ್ನುವುದನ್ನು ಕನಿಷ್ಠ ಜ್ಞಾನವಿಲ್ಲದೇ ಹೇಳಿಕೆ ನೀಡಿದ್ದು ಖಂಡನೀಯ. ಇದು ಜಾತ್ಯಾತೀತ ರಾಷ್ಟ್ರಕ್ಕೆ ಶೋಭೆ ತರುವಂತದಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಬಾರದು. ಶಾಸಕರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಸರ್ಕಾರ ಅವರ ಮೇಲೆ ಸೂಕ್ತ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಸಾಜೀದ್ ಸಮೀರ್, ಕಾಂಗ್ರೆಸ್ ಮುಖಂಡ ಅಸ್ಲಂಪಾಷ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಎಂ.ಆರ್ ಭೇರಿ, ಖಾಜಾ ಅಹ್ಮದ್ ಅಸ್ಲಂ, ತೌಸೀಫ್ ಅಹ್ಮದ್, ಜಿಲಾನಿ ಪಾಶ, ಮೌಲಾನಾ ಫರೀದ್ ಉಮ್ರಿ, ಮಹಮ್ಮದ್ ಇಮ್ತಿಯಾಜ್ ಖಾನ್, ತನ್ವೀರ್ ಖಾನ್, ಅಲ್ತಾಫ್ , ಮಹಮ್ಮದ್ ಶಫಿ ಸೇರಿದಂತೆ ಮುಸ್ಲಿಂ ಧರ್ಮಗುರುಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.