ADVERTISEMENT

ಶಾಲಾ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣದ ಪಠ್ಯಕ್ರಮ ಬೇಕು: ನಾಗಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 11:46 IST
Last Updated 17 ಸೆಪ್ಟೆಂಬರ್ 2025, 11:46 IST
   

ರಾಯಚೂರು: ‘ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ. ಶಾಲಾ ಹಂತದಲ್ಲಿ ಕಿಶೋರಿಯರಿಗೆ ಲೈಂಗಿಕ ಶಿಕ್ಷಣದ ತಿಳಿವಳಿಕೆ ನೀಡುವ ಅಗತ್ಯವಿದೆ. ಪಠ್ಯಕ್ರಮದಲ್ಲಿ ಕೆಲವೊಂದು ವಿಷಯಗಳನ್ನು ಅಳವಡಿಸುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರಬರೆಯಾಗಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.

‘ಅನೇಕ ಬಾಲಕಿಯರಿಗೆ ಯುವಕರ ದೈಹಿಕ ಸಂಪರ್ಕದಿಂದ ಗರ್ಭಧಾರಣೆಯಾಗುತ್ತದೆ ಎನ್ನುವ ತಿಳಿವಳಿಕೆಯೇ ಇಲ್ಲ’ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ರಾಜ್ಯದ ವಿವಿಧೆಡೆ ಪ್ರೌಢಶಾಲಾ ಕಾಲೇಜುಗಳಿಗೆ ಭೇಟಿಕೊಟ್ಟು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಕೆಲವೊಂದು ವಿಷಯದಲ್ಲಿ ಬಾಲಕಿಯರು ಮುಗ್ಧವಾಗಿರುವುದು ಕಂಡು ಬಂದಿದೆ. ಹೀಗಾಗಿ ಪಠ್ಯದ ಮೂಲಕವೇ ಬಾಲಕಿಯರಿಗೆ ತಿಳಿವಳಿಕೆ ನೀಡಿದರೆ ಅವರು ಹೆಚ್ಚು ಜಾಗೃತರಾಗಿತ್ತಾರೆ’ ಎಂದರು.

ADVERTISEMENT

‘ಎಲ್ಲದಕ್ಕೂ ಬಾಲಕಿಯರನ್ನೇ ಹೊಣೆ ಮಾಡಲಾಗದು. ಕೆಲವು ಯುವಕರು ಅಥವಾ ಪುರುಷರು ಪುಸಲಾಯಿಸಿ ಬಾಲಕಿಯರನ್ನು ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ನಂತರ ಅವರನ್ನು ದೈಹಿಕವಾಗಿ ಬಳಸಿಕೊಳ್ಳುತ್ತಾರೆ. ಬಹುತೇಕ ಪ್ರಕರಣಗಳಲ್ಲೇ ಇದೇ ಆಗಿದೆ’ ಎಂದು ತಿಳಿಸಿದರು.

‘ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಲು ಬಾಲ್ಯ ವಿವಾಹವೂ ಕಾರಣವಾಗಿದೆ. ಬಾಲಕಿಯರು ವೈದ್ಯಕೀಯ ತಪಾಸಣೆಗೆ ಸರ್ಕಾರಿ ಅಸ್ಪತ್ರೆಗೆ ಬಂದಾ ಬಾಲಕಿಯರು ಗರ್ಭಿಣಿಯಾಗಿರುವುದು ಬೆಳಕಿಗೆ ಬರುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೆ ಅವು ಹೊರಗೆ ಬರುತ್ತಿಲ್ಲ. ಹೀಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಫೋಸ್ಕೊ ಹಾಗೂ ಬಾಲ್ಯ ವಿವಾಹ ನಿಷೇಧಂತಹ ಬಲಿಷ್ಠ ಕಾನೂನುಗಳು ಜಾರಿಯಲ್ಲಿದ್ದರೂ ಪಾಲಕರು ಕಡಿಮೆ ವಯಸ್ಸಿನಲ್ಲಿ ತಮ್ಮ ಮಕ್ಕಳನ್ನು ಮದುವೆ ಮಾಡಿಕೊಡುವುದನ್ನು ನಿಲ್ಲಿಸಿಲ್ಲ. ಎಲ್ಲವನ್ನೂ ಕಾನೂನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಪಾಲಕರಲ್ಲೂ ಜಾಗೃತಿ ಮೂಡಬೇಕಿದೆ’ ಎಂದು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.