ADVERTISEMENT

ಮಾನ್ವಿ: ಗ್ರಾಮೀಣ ಸಂತೆ ಕಟ್ಟೆ ನಿರ್ಮಾಣಕ್ಕೆ ‘ನರೇಗಾ ಬಲ’

2022-–23ನೇ ಸಾಲಿನ ನರೇಗಾ ಯೋಜನೆಯ ಅನುದಾನ ಬಳಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 5:53 IST
Last Updated 3 ಮಾರ್ಚ್ 2024, 5:53 IST
ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮೀಣ ಸಂತೆ ಕಟ್ಟೆ
ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮೀಣ ಸಂತೆ ಕಟ್ಟೆ   

ಮಾನ್ವಿ: ತಾಲ್ಲೂಕಿನ ಹಿರೇಕೊಟ್ನೆಕಲ್ ಸೇರಿದಂತೆ ವಿವಿಧೆಡೆ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಸಂತೆ ಕಟ್ಟೆಗಳ ನಿರ್ಮಾಣ ಸ್ಥಳೀಯರ ಮೆಚ್ಚುಗೆ ಗಳಿಸಿದೆ.

ಹಿರೇಕೋಟ್ನೆಕಲ್ ಸೇರಿ ಹಲವು ಗ್ರಾಮಗಳಲ್ಲಿ ತರಕಾರಿ ಮಾರಾಟ ಹಾಗೂ ಸಂತೆಗೆ ಸೂಕ್ತ ಸ್ಥಳ ಇಲ್ಲದೆ ತೊಂದರೆ ಇತ್ತು.
ಸದರಿ ಸಮಸ್ಯೆ ಕುರಿತು ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರು.

ಕಾರಣ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 2022-23ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಸಂತೆ ಮಾರುಕಟ್ಟೆ ಅವಶ್ಯ ಇರುವ ಗ್ರಾಮ ಪಂಚಾಯಿತಿಗಳಿಗೆ ನರೇಗಾ ಕ್ರಿಯಾ ಯೋಜನೆ ಅಡಿಯಲ್ಲಿ ಗ್ರಾಮೀಣ ಸಂತೆ ಕಟ್ಟೆ ನಿರ್ಮಾಣಕ್ಕೆ ಆದೇಶ ಹೊರಡಿಸಿದ್ದರು. ಪರಿಣಾಮ ಹಿರೇಕೊಟ್ನೆಕಲ್ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ 2022-23ನೇ ಸಾಲಿನ ಒಟ್ಟು ₹14 ಲಕ್ಷ ಅಂದಾಜು ಮೊತ್ತದಲ್ಲಿ ಸಂತೆ ಕಟ್ಟೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ADVERTISEMENT

ಕಾಮಗಾರಿಗೆ 886 ಮಾನವ ದಿನಗಳ ಸೃಜನೆ ಮಾಡಿ 63 ಕೂಲಿ ಕಾರ್ಮಿಕರು ಸತತವಾಗಿ 14 ದಿನಗಳು ಕೆಲಸ ನಿರ್ವಹಿಸಿ ಒಟ್ಟು ₹2.72 ಲಕ್ಷ ಕೂಲಿ ಹಣ ಪಡೆದಿದ್ದಾರೆ. ಸಾಮಗ್ರಿ ವೆಚ್ಚವಾಗಿ ₹8.53 ಲಕ್ಷ ವ್ಯಯಿಸಿ ಸುಸಜ್ಜಿತ ಗ್ರಾಮೀಣ ಸಂತೆ ಕತೆಕಟ್ಟೆ ನಿರ್ಮಾಣ ಮಾಡಲಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯಡಿ ತಾಲ್ಲೂಕಿನ ಪೋತ್ನಾಳ, ಜಾನೇಕಲ್ ಹಾಗೂ ಬ್ಯಾಗವಾಟ್ ಗ್ರಾಮಗಳಲ್ಲಿಯೂ ಗ್ರಾಮೀಣ ಸಂತೆ ಕಟ್ಟೆಗಳನ್ನು ನಿರ್ಮಿಸಲಾಗಿದೆ.

ಗ್ರಾಮ ಪಂಚಾಯಿತಿಗಳು ಸದರಿ ಗ್ರಾಮೀಣ ಸಂತೆ ಕಟ್ಟೆಗಳ ನಿರ್ವಹಣೆ ಜವಾಬ್ದಾರಿಯನ್ನು ಒಂದು ವರ್ಷದ ಅವಧಿಗೆ ಸ್ಥಳೀಯ ಸ್ವ–ಸಹಾಯ ಗುಂಪುಗಳ ಒಕ್ಕೂಟ ಅಥವಾ ಖಾಸಗಿ ವ್ಯಕ್ತಿಗಳಿಗೆ ₹1 ರಿಂದ2 ಲಕ್ಷದವರೆಗೆ ಬಿಡ್ ಮೂಲಕ ನೀಡಿವೆ.

ಗ್ರಾಮೀಣ ಸಂತೆ ಕಟ್ಟೆಗಳ ನಿರ್ಮಾಣದ ಮೂಲಕ ಗ್ರಾಮಸ್ಥರು ಹಾಗೂ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ಮೂಲಕ ಗ್ರಾಮ ಪಂಚಾಯಿತಿಗೆ ಅದಾಯ ವೃದ್ಧಿಸಿರುವ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೋತ್ನಾಳ ಗ್ರಾಮದಲ್ಲಿ ವ್ಯಾಪಾರ ವಹಿವಾಟು ಆರಂಭಿಸಿರುವ ಗ್ರಾಮೀಣ ಸಂತೆ ಕಟ್ಟೆ
ಬೇಡಿಕೆ ಇರುವ ಇನ್ನುಳಿದ ಗ್ರಾಮ ಪಂಚಾಯಿತಿಗಳಲ್ಲಿ ಆದ್ಯತೆ ಮೇರೆಗೆ ಗ್ರಾಮೀಣ ಸಂತೆ ಕಟ್ಟೆಗಳನ್ನು ನಿರ್ಮಿಸಲಾಗುವುದು
-ಖಾಲೀದ್ ಅಹ್ಮದ್ ತಾ.ಪಂ ಇಒ ಮಾನ್ವಿ
ಗ್ರಾಮೀಣ ಭಾಗದಲ್ಲಿ ಸಂತೆ ಕಟ್ಟೆಗಳ ನಿರ್ಮಾಣದಿಂದ ಸ್ಥಳೀಯ ತರಕಾರಿ ವರ್ತಕರ ವ್ಯಾಪಾರಕ್ಕೆ ಅನುಕೂಲವಾಗಲಿದೆ
ಮಹಿಬೂಬ್ ನಾಯ್ಕ್ ತರಕಾರಿ ಸಗಟು ವ್ಯಾಪಾರಿ ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.