ADVERTISEMENT

ಲಿಂಗಸುಗೂರು: ಕೋಟಿ ಸುರಿದರೂ ದುಸ್ಥಿತಿಯಲ್ಲಿ ಕಾಲುವೆಗಳು!

ಸರ್ಕಾರದ ನಿರ್ಲಕ್ಷ್ಯದಲ್ಲಿ ನವಲಿ-ರಾಂಪುರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ

ಪ್ರಜಾವಾಣಿ ವಿಶೇಷ
Published 2 ಆಗಸ್ಟ್ 2023, 6:18 IST
Last Updated 2 ಆಗಸ್ಟ್ 2023, 6:18 IST
ಲಿಂಗಸುಗೂರು ತಾಲ್ಲೂಕಿನ ನರಕಲದಿನ್ನಿ ಬಳಿ ರಾಂಪುರ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಕುಸಿದಿದೆ
ಲಿಂಗಸುಗೂರು ತಾಲ್ಲೂಕಿನ ನರಕಲದಿನ್ನಿ ಬಳಿ ರಾಂಪುರ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಕುಸಿದಿದೆ   

ಬಿ.ಎ. ನಂದಿಕೋಲಮಠ

ಲಿಂಗಸುಗೂರು: ತಾಲ್ಲೂಕಿನ ರೈತರ ಜೀವನಾಡಿ ನವಲಿ–ರಾಂಪುರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡು ಎರಡು ದಶಕಗಳೂ ಪೂರೈಸುತ್ತಿವೆ. ಆಡಳಿತ ನಡೆಸಿದ ಸರ್ಕಾರಗಳ ಮಲತಾಯಿ ಧೋರಣೆಯಿಂದ ಯೋಜನೆ ವ್ಯಾಪ್ತಿಯ ಪ್ರದೇಶದ ಬಹುತೇಕ ಕಾಲುವೆಗಳು ದುಸ್ಥಿತಿಗೆ ತಲುಪಿವೆ. ರೈತರ ಜಮೀನಿಗೆ ನೀರು ಹರಿಸುವುದು ಸವಾಲಾಗಿ ಪರಿಣಮಿಸಿದೆ.

ಒಂದನೇ ಜಾಕ್‌ವೆಲ್‍ನಿಂದ ಎರಡನೇ ಜಾಕ್‌ವೆಲ್‌ಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಮುಖ್ಯನಾಲೆಯ ಕಾಂಕ್ರಿಟ್‍ ಲೈನಿಂಗ್‍ ಅಲ್ಲಲ್ಲಿ ಕುಸಿದಿದೆ. ರೈತರ ಅನುಕೂಲಕ್ಕೆ ನಿರ್ಮಿಸಿದ ಮೆಟ್ಟಿಲುಗಳು ಕಿತ್ತು ಹೋಗಿ ಅಪಾಯದ ಮುನ್ಸೂಚನೆ ನೀಡುತ್ತಿವೆ. ವಿತರಣಾ ನಾಲೆ, ಲ್ಯಾಟಿರಲ್‍ ದುಸ್ಥಿತಿ ಹೇಳುವಂತಿಲ್ಲ. ರೈತರೇ ತಮ್ಮ ಅನುಕೂಲಕ್ಕೆ ತಕ್ಕಂತೆ ನೀರು ಪಡೆಯಲು ಹರಸಾಹಸ ಪಡುತ್ತಿರುವುದು ಸಾಮಾನ್ಯವಾಗಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಕೆಲವೆಡೆ ಕಾಲುವೆ ಮುಚ್ಚಿ ಹೋಗುವ ಭೀತಿ ಎದುರಾಗಿದೆ.

ADVERTISEMENT

‘ಮೇಲುಸ್ತುವಾರಿ ಮತ್ತು ನಿರ್ವಹಣೆ ಹೆಸರಲ್ಲಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯರ್ಥವಾಗಿ ಖರ್ಚು ಮಾಡಲಾಗುತ್ತಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ಗುಣಮಟ್ಟದ ಕೆಲಸ ಮಾಡಿಸದೆ ಮನಸೋ ಇಚ್ಛೆ ಕಳಪೆ ಕಾಮಗಾರಿ ಮಾಡುತ್ತ ಸಾಗಿದ್ದು, ಕಾಲುವೆಗಳ ದುಸ್ಥಿತಿಗೆ ಕಾರಣ. ರೈತರು ಸಾಕಷ್ಟು ಬಾರಿ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಗಮನ ಸೆಳೆದಿದ್ದೇವೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ಹೂಳು, ಜಂಗಲ್‍ ಕಟಿಂಗ್‍ ಮಾಡಿಸುತ್ತಿದೆ’ ಎಂದು ರೈತರು ದೂರಿದರು.

‘ಯೋಜನೆ ನಿರ್ವಹಣೆ ಕೆಲಸವನ್ನು ಐದು ಉಪ ವಿಭಾಗಗಳಿಗೆ ಹಂಚಿಕೆ ಮಾಡಿದ್ದರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಎರಡು ವರ್ಷದಿಂದ ನಿರ್ವಹಣಾ ಕಾಮಗಾರಿ ನಡೆದಿಲ್ಲ. ಕೋಟ್ಯಂತರ ರೂಪಾಯಿ ಬಿಲ್‍ ಅಕ್ರಮವಾಗಿ ಪಾವತಿಸಿಕೊಂಡಿದ್ದಾರೆ. ಕುಸಿದ ಕಾಲುವೆ ದುರಸ್ತಿ ಬಗ್ಗೆ ಕೇಳಿದರೆ, ಟೆಂಡರ್‌ ಆಗಿದ್ದು ಸರ್ಕಾರ ಹಸಿರು ನಿಶಾನೆ ತೋರಿದ ತಕ್ಷಣ ದುರಸ್ತಿ ಮಾಡುತ್ತೇವೆ’ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ರೈತ ಸಂಘದ ಶಿವಪುತ್ರಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಯೋಜನೆ ಕಾಮಗಾರಿ ನಡೆದು ಎರಡು ದಶಕಗಳು ಪೂರ್ಣಗೊಂಡಿವೆ. ಸರ್ಕಾರಗಳ ಮಲತಾಯಿ ಧೋರಣೆ, ನಿರ್ವಹಣೆಗೆ ಹಣಕಾಸು ಸಮಸ್ಯೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕಾಲುವೆ ಸಂರಕ್ಷಣೆ ಕಾರ್ಯ ನಡೆದಿಲ್ಲ. ಅಲ್ಲಲ್ಲಿ ತೇಪೆ ಕೆಲಸ ಮಾಡಿಸುತ್ತ ಬಂದಿದ್ದಾರೆ. ಈಗಿರುವ ದುಸ್ಥಿತಿ ನೋಡಿದರೆ ಇಡೀ ಯೋಜನೆ ವ್ಯಾಪ್ತಿಯ ನಾಲೆಗಳನ್ನು ಆಧುನೀಕರಣಕ್ಕೆ ಒಳಪಡಿಸಬೇಕು. ಇಲ್ಲದೆ ಹೋದರೆ ಭವಿಷ್ಯದಲ್ಲಿ ತೊಂದರೆ ಎದುರಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಶಕ್ತಿನಗರ ಬಳಿಯ ಸಗಮಕುಂಟ ಗ್ರಾಮದ ನಾರಾಯಣಪುರ ಬಲದಂಡೆ ಕಾಲುವೆ ಒಡೆದಿರುವುದು

ಕಾಲುವೆ ಆಧುನೀಕರಣ ಕಾಮಗಾರಿ ಅಪೂರ್ಣ

ಶಕ್ತಿನಗರ: ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಅಪೂರ್ಣಗೊಂಡಿದ್ದು ಕಾಲುವೆ ನೀರು ರೈತರ ಜಮೀನುಗಳಿಗೆ ನುಗ್ಗಿ ಸಂಕಷ್ಟ ಎದುರಾಗುತ್ತಿದೆ. ದೇವದುರ್ಗ ತಾಲ್ಲೂಕಿನ ಚಿಕ್ಕಹೊನ್ನಕುಣಿಯಿಂದ ರಾಯಚೂರು ತಾಲ್ಲೂಕಿನ ಸಗಮಕುಂಟ ಗ್ರಾಮದ ಸರ್ವೆ ನಂಬರ್ 63/3 ರವರೆಗೆ ಕಾಲುವೆ ನಿರ್ಮಿಸಲಾಗಿದೆ. ಆದರೆ ಈ ಕಾಲುವೆಯ ಆಧುನೀಕರಣ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ನಡುವೆ ಸುಮಾರು 200 ಮೀಟರ್‌ ಕಾಲುವೆ ಅಭಿವೃದ್ಧಿ ಮಾಡಿಲ್ಲ. ಇದರಿಂದಾಗಿ 2019 ರಿಂದ ಪ್ರತಿ ವರ್ಷವೂ ಮಳೆ ಬಂದು ಕಾಲುವೆ ಒಡೆದು ರೈತರ ಜಮೀನುಗಳಿಗೆ ಬಾರಿ ಪ್ರಮಾಣದಲ್ಲಿ ನೀರು ನುಗ್ಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಆದರೂ ಕಾಲುವೆ ದುರಸ್ತಿ ಮಾಡಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪರಿಹಾರ ನೀಡುತ್ತಿಲ್ಲ ಎಂದು ರೈತರಾದ ಸುರೇಶ ಬಡಿಗೇರ ಹಾಗೂ ರಂಗಪ್ಪ ಅವರು ದೂರಿದರು.

‘ಕೆಲವೆಡೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ಕೆಲವಡೆ ಹೂಳು ತುಂಬಿದೆ. ಮುಳ್ಳು–ಕಂಟಿ ಬೆಳೆದು ಕಾಲುವೆ ಮುಚ್ಚಿ ಹೋಗಿದೆ. ಪ್ರತಿವರ್ಷ ಬೆಳೆ ಬೆಳೆದು ಕಾಲುವೆ ನೀರಿನ ಕಾರಣಕ್ಕೆ ಬೆಳೆ ನಾಶ ಮಾಡಿಕೊಳ್ಳುತ್ತಿದ್ದೇವೆ. ಮಣ್ಣು ಕೊಚ್ಚಿಕೊಂಡು ಹೋಗಿ ಜಮೀನುಗಳು ಹಾಳಾಗುತ್ತಿವೆ. ಈ ಕುರಿತು ಜಿಲ್ಲಾಡಳಿತದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕಾಲುವೆ ದುರಸ್ತಿಗೆ ಮುಂದಾಗುತ್ತಿಲ್ಲ’ ಎಂದು ರೈತರಾದ ಈರೇಶ ರುಕ್ಕಮ್ಮ ರಾಮಪ್ಪ ನಾಯಕ ಹಾಗೂ ಕೃಷ್ಣಪ್ಪ ಯಾದವ ಅವರು ಅಳಲು ತೋಡಿಕೊಂಡಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಆಯ್ದ ಸ್ಥಳಗಳಲ್ಲಿ ಮುಖ್ಯ ನಾಲೆ ದುರಸ್ತಿ ಸೇರಿದಂತೆ ನಿರ್ವಹಣೆ ಕಾಮಗಾರಿಗೆ ಟೆಂಡರ್‌ ಕರೆದಿದ್ದೇವೆ. ಸರ್ಕಾರ ಅನುಮೋದನೆ ನೀಡಿದರೆ ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
- ವಿದ್ಯಾಧರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಸಗಮಕುಂಟ ಸಗಮಕುಂಟ ಗ್ರಾಮದಲ್ಲಿ ಕಾಲುವೆ ಒಡೆದಿರುವ ಮಾಹಿತಿ ಇದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ
-ತಿಪ್ಪನಗೌಡ ಇಇ ಎನ್‌ಆರ್‌ಬಿಸಿ ರಾಯಚೂರು
ಸಗಮಕುಂಟ ಗ್ರಾಮದಲ್ಲಿ ಕಾಲುವೆ ಒಡೆದು ರೈತರ ಬೆಳೆಗಳು ಹಾಳಾಗಿವೆ. ನಷ್ಟ ಪರಿಹಾರ ನೀಡಬೇಕು ಮತ್ತು ಅಪೂರ್ಣಗೊಂಡಿರುವ ಕಾಲುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಿಗೆ ಮನವಿ ಸಲ್ಲಿಸಲಾಗಿದೆ
-ವೀರೇಶ ಬಡಿಗೇರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.