ADVERTISEMENT

‘ಮೌಲ್ಯಯುತ ಕೃತಿ ರಚನೆ ಮಾಡಿ: ಹಿರಿಯ ಸಾಹಿತಿ ವೀರ ಹನುಮಾನ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:41 IST
Last Updated 21 ಸೆಪ್ಟೆಂಬರ್ 2020, 1:41 IST
ರಾಯಚೂರಿನ ಕನ್ನಡ ಭವನದಲ್ಲಿ ಯುವಕವಿ ಸುರೇಶ ಹೀರಾ ಅವರ ಬಣ್ಣದ ಪರಪಂಚ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು
ರಾಯಚೂರಿನ ಕನ್ನಡ ಭವನದಲ್ಲಿ ಯುವಕವಿ ಸುರೇಶ ಹೀರಾ ಅವರ ಬಣ್ಣದ ಪರಪಂಚ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು   

ರಾಯಚೂರು: ಜಿಲ್ಲೆಯಲ್ಲಿ ಯುವ ಸಾಹಿತಿಗಳು ಆಸಕ್ತಿಯಿಂದ ಕೃತಿ ರಚನೆ ಮಾಡುತ್ತಿರುವುದು ಶ್ಲಾಘನೀಯ. ಮೌಲ್ಯಯುತ ಕೃತಿ ರಚಿಸುವ ಮೂಲಕ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು ಎಂದು ಹಿರಿಯ ಸಾಹಿತಿ ವೀರ ಹನುಮಾನ ಸಲಹೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಮೋಹನ ಪ್ರಕಾಶನ ಸಿರವಾರ ಅವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವಕವಿ ಸುರೇಶ ಹೀರಾ ಅವರ ಬಣ್ಣದ ಪರಪಂಚ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಜಿಲ್ಲೆಯಲ್ಲಿ ಈಚೆಗೆ ಯುವ ಕವಿಗಳು ಸಾಹಿತ್ಯ ಕ್ಷೇತ್ರದಲ್ಲಿ ತೊಡಗುತ್ತಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ಅವಶ್ಯ. ಹೈಕು, ತ್ರಿಪದಿ, ಗಜಲ್‌ನಂಥ ವಿವಿಧ ಪ್ರಕಾರದ ಕೃತಿಗಳನ್ನು ರಚನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಯುವಕರಿಂದ ಅನೇಕ ಕೃತಿಗಳು ಹೊರ ಬರುತ್ತಿದ್ದು ಇನ್ನೂ ಹೆಚ್ಚಿನ ಮೌಲ್ಯಯುತವಾದ ಕೃತಿಗಳು ಬರಬೇಕಿದೆ ಎಂದರು.

ADVERTISEMENT

ಕವಿ ಬರೆದ ನಂತರ ಕವಿಯಾಗದೇ ಕವಿಯಾಗಿ ಬರೆಯಬೇಕು. ‌ಒಂದು ಒಳ್ಳೆಯ ಕವಿತೆ ಸಾವನ್ನೂ ಗೆಲ್ಲುತ್ತದೆ. ಕವಿಗಳು ಸಮಾಜಕ್ಕೆ ಮಾರ್ಗದರ್ಶಕರಾಗಬೇಕು.‌ಇದಕ್ಕಾಗಿ ಸಾಹಿತಿಗಳು ನಿರಂತರ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಕವಿಗಳನ್ನು ತಿದ್ದುವ ಕಾರ್ಯವಾಗಬೇಕು. ನಾನು‌ ನಮ್ಮದೇ ಶ್ರೇಷ್ಟ ಎನ್ನುವುದು‌ ಅಹಂ ಇರಬಾರದು. ಸಾಹಿತ್ಯ ಸಮಾಜಕ್ಕೆ ಚಿಂತನ ಶೀಲರಾಗುವಂತೆ ಮಾಡಬೇಕು ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಮಹಾದೇವಪ್ಪ ಮಾತನಾಡಿ, ಇಂದಿನ ಯುವಕರಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು ಪುಸ್ತಕ ಓದುವ ಹಾವ್ಯಾಸ ಕಡಿಮೆಯಾಗಿದ್ದು ಕಳವಳಕಾರಿ. ಸುರೇಶ ಹೀರಾ ಅವರು ತಮ್ಮ ಪ್ರಸ್ತುತ ಕೃತಿಯಲ್ಲಿ ಮೊಬೈಲ್, ಪುಸ್ತಕದ ವ್ಯತ್ಯಾಸ, ಪ್ರೀತಿ–ಪ್ರೇಮ, ಸತಿ–ಪತಿಗಳ ಹಾಗೂ ಪ್ರಚಲಿತ ಘಟನೆಗಳ‌ನ್ನು ಸೇರಿಸಿ ಬರೆದಿದ್ದು ಒಳ್ಳೆಯ ಸಂದೇಶ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಳೇಜಿನ ಸಹಾಯಕ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ, ಯುವ ಕವಿ ಈರಣ್ಣ ಬೆಂಗಾಲಿ, ಕೃತಿ ಕರ್ತೃ ಸುರೇಶ ಹೀರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.