ಸಿಂಧನೂರು–ಮಸ್ಕಿ ನಡುವಿನ ಬೂತಲದಿನ್ನಿ ಬಳಿ ತಾತ್ಕಾಲಿಕ ರಸ್ತೆ ಮಳೆಯಿಂದಾಗಿ ಕೊಚ್ಚಿ ಹೋಗಿದ್ದರಿಂದ ವಾಹನಗಳು ರಸ್ತೆ ಮಧ್ಯೆಯೇ ನಿಂತುಕೊಂಡಿದ್ದವು
ಸಿಂಧನೂರು(ರಾಯಚೂರು ಜಿಲ್ಲೆ): ಶ್ರೀರಂಗಪಟ್ಟಣ–ಬೀದರ್ (150ಎ) ರಾಷ್ಟ್ರೀಯ ಹೆದ್ದಾರಿಯಲ್ಲಿ ಬೂತಲದಿನ್ನಿ ಬಳಿ ಸೇತುವೆ ಕಾಮಗಾರಿ ಸ್ಥಳದಲ್ಲಿ ತಾತ್ಕಾಲಿಕ ರಸ್ತೆ ಮಳೆಯಿಂದ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡು, ಪ್ರಯಾಣಿಕರು ನಾಲ್ಕು ತಾಸು ಪರದಾಡಿದರು.
ಮಸ್ಕಿ–ಸಿಂಧನೂರು ಮಧ್ಯೆ ಬೂತಲದಿನ್ನಿ ಬಳಿ ಹಳ್ಳಕ್ಕೆ ಸೇತುವೆ, ಪಕ್ಕದಲ್ಲಿ ಪೈಪ್ ಅಳವಡಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಮಳೆ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಬೆಳಿಗ್ಗೆ 6.30ರಿಂದ 11 ಗಂಟೆಯವರೆಗೂ ಮೂರು ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿದ್ದವು. ಬೆಂಗಳೂರು, ಬಳ್ಳಾರಿ ಕಡೆಯಿಂದ ಬಂದಿದ್ದ ಬಸ್‌ಗಳು, ಲಾರಿಗಳು, ಶಾಲಾ ವಾಹನಗಳು ಸಾಲುಗಟ್ಟಿ ನಿಂತಿದ್ದವು.
‘ಹಸಮಕಲ್‌ನಿಂದ ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ಲಿಂಗಮ್ಮ ಎಂಬ ಗರ್ಭಿಣಿಯನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ರಸ್ತೆ ಕೊಚ್ಚಿ ಹೋಗಿದ್ದರಿಂದ ಮಹಿಳೆಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಹಳ್ಳ ದಾಟಿಸಿ, ನಂತರ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು’ ಎಂದು ನಿಂಗನಗೌಡ ಅಳಲು ತೋಡಿಕೊಂಡರು.
‘ಸೋಮವಾರ ಬೆಳಗಿನಜಾವ ಮಳೆ ಅಬ್ಬರಿಸಿದ್ದು ತಾತ್ಕಾಲಿಕ ರಸ್ತೆ ಕೊಚ್ಚಿಹೋಗಿತ್ತು. ಸದ್ಯ ಸರಿಪಡಿಸ ಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಎಂಜಿನಿಯರ್ ಗೋಪಾಲ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆ ಕುಪನೂರಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯ, ನೂರಾರು ಎಕರೆ ಜಮೀನಿನಲ್ಲಿ ಬೆಳೆ ಸೋಮವಾರ ಭಾರಿ ಮಳೆಗೆ ಜಲಾವೃತವಾಗಿದೆ. ಗಾರಂಪಳ್ಳಿ ಯಲ್ಲಿ ಸಿಡಿಲಿಗೆ 4 ಮೇಕೆಗಳು ಸತ್ತಿವೆ.
ಬೀದರ್ ಜಿಲ್ಲೆಯಲ್ಲಿ ನಗರ, ಹುಲಸೂರ, ಭಾಲ್ಕಿ, ಹುಮನಾಬಾದ್ ಮತ್ತು ಚಿಟಗುಪ್ಪದಲ್ಲಿ ಉತ್ತಮ ಮಳೆಯಾಗಿದೆ.
ಹುಬ್ಬಳ್ಳಿ: ಬಳ್ಳಾರಿ, ವಿಜಯನಗರ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ, ಸೋಮವಾರ ಮಳೆಯಾಯಿತು. ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತುಂತುರು ಮಳೆ ಮುಂದುವರೆಯಿತು.
ಬಳ್ಳಾರಿ ಜಿಲ್ಲೆಯ ತೆಕ್ಕಲ ಕೋಟೆಯಲ್ಲಿ ಹಳ್ಳಕೊಳ್ಳಗಳು ಭರ್ತಿಯಾಗಿವೆ. ಐದು ಮನೆಗಳಿಗೆ ಹಾನಿಯಾಗಿದೆ. ಕರೂರು, ಎಚ್ ಹೊಸಹಳ್ಳಿ, ಬಲಕುಂದಿ, ಸಿರಿಗೇರಿ, ಎಂ.ಸುಗೂರು ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಯು. ಕಲ್ಲಹಳ್ಳಿ ಕೆರೆ, 500 ಎಕರೆ ವಿಸ್ತೀರ್ಣದ ಕುಂಚೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.