ADVERTISEMENT

ರಾಯಚೂರು: ನಿಸ್ತೇಜಗೊಂಡ ದೀಪಾವಳಿ ಪೂರ್ವ ವ್ಯಾಪಾರ

ಚಳಿಯಿಂದಾಗಿ ಮುದುರಿಕೊಂಡ ರಾಯಚೂರು ಜನರ ಮೈ ಮನ

ನಾಗರಾಜ ಚಿನಗುಂಡಿ
Published 12 ನವೆಂಬರ್ 2020, 13:29 IST
Last Updated 12 ನವೆಂಬರ್ 2020, 13:29 IST
ರಾಯಚೂರಿನ ಬಟ್ಟೆ ಅಂಗಡಿಯೊಂದರಲ್ಲಿ ಗ್ರಾಹಕರಿಲ್ಲದೆ ಕೆಲಸಗಾರರು ಚಿಂತೆಯಲ್ಲಿ ಕುಳಿತಿರುವುದು ಗುರುವಾರ ಕಂಡುಬಂತು
ರಾಯಚೂರಿನ ಬಟ್ಟೆ ಅಂಗಡಿಯೊಂದರಲ್ಲಿ ಗ್ರಾಹಕರಿಲ್ಲದೆ ಕೆಲಸಗಾರರು ಚಿಂತೆಯಲ್ಲಿ ಕುಳಿತಿರುವುದು ಗುರುವಾರ ಕಂಡುಬಂತು   

ರಾಯಚೂರು: ಲಾಭದ ನಿರೀಕ್ಷೆಯೊಂದಿಗೆ ವಿವಿಧ ಸರಕುಗಳನ್ನು ದಾಸ್ತಾನು ಮಾಡಿಕೊಂಡಿರುವ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿವರ್ಷ ದೀಪಾವಳಿ ಪೂರ್ವ ನಡೆಯುತ್ತಿದ್ದ ವಹಿವಾಟು ಇನ್ನೂ ಚೇತರಿಸಿಕೊಳ್ಳದಿರುವುದು ಸಂಕಷ್ಟ ತಂದೊಡ್ಡಿದೆ.

ಮಾರುಕಟ್ಟೆ ಉದ್ದಕ್ಕೂ ಇರುವ ಸಿದ್ಧ ಉಡುಪು ಮಾರಾಟ ಮಳಿಗೆಗಳು, ಪೂಜಾ ಸಾಮಗ್ರಿ ಮಾರಾಟ ಮಳಿಗೆಗಳು, ಹೂವು–ಹಣ್ಣುಗಳ ವ್ಯಾಪಾರ, ಸಿಹಿ ತಿಂಡಿ ಮಾರಾಟ ಅಂಗಡಿಗಳು, ಸ್ಟೇಷನರಿ ಮಳಿಗೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ದೀಪಾವಳಿ ಸಂದರ್ಭದಲ್ಲಿ ಹೊಸ ಬಟ್ಟೆಗಳ ಖರೀದಿಗಾಗಿ ಬರುತ್ತಿದ್ದ ದೃಶ್ಯ ಅಪರೂಪವಾಗಿದೆ.

ರಿಯಾಯ್ತಿ, ವಿನಾಯಿತಿ ನೀಡಿದರೂ ವ್ಯಾಪಾರದಲ್ಲಿ ಚೇತರಿಕೆ ಕಾಣುತ್ತಿಲ್ಲ ಎನ್ನುವ ಅಳಲು ವ್ಯಾಪಾರಿಗಳದ್ದು. ಕೋವಿಡ್‌ ಪ್ರಕರಣಗಳ ಸಂಖ್ಯೆ ತಗ್ಗಿರುವುದರಿಂದ ದೀಪಾವಳಿ ಸಂದರ್ಭದಲ್ಲಿ ಜನರು ಮನೆಗಳಿಂದ ಹೊರಬಹುದು ಎನ್ನುವ ಆಶಾಭಾವದೊಂದಿಗೆ ಸರಕುಗಳನ್ನು ದಾಸ್ತಾನು ಮಾಡಿಕೊಂಡಿರುವ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್‌ಗಳ ಸಂಚಾರ ಇನ್ನೂ ಆರಂಭಿಸಿಲ್ಲ. ಅಲ್ಲದೆ, ಮೊದಲಿನಂತೆ ಜನರ ಕೈಯಲ್ಲಿ ಹಣವಿಲ್ಲ ಎನ್ನುವುದು ವ್ಯಾಪಾರಿಗಳ ವಿಶ್ಲೇಷಣೆ.

ADVERTISEMENT

‘ಕಳೆದ ವರ್ಷ ಬರಗಾಲದಿಂದ ವ್ಯಾಪಾರ ಇರಲಿಲ್ಲ. ಈ ವರ್ಷ ಲಾಕ್‌ಡೌನ್‌ನಿಂದಾಗಿ ನಷ್ಟವಾಗಿದೆ. ಮುಂಗಾರು ಮಳೆ ಅತೀಯಾಗಿ ಸುರಿದಿದ್ದರೂ ತಕ್ಕಮಟ್ಟಿಗೆ ರೈತರು ಹತ್ತಿ, ಭತ್ತ ಮಾರಾಟ ಮಾಡುತ್ತಿದ್ದಾರೆ. ಆದರೆ, ಹಬ್ಬ ಆಚರಿಸುವುದಕ್ಕೆ ಹೊಸ ಬಟ್ಟೆಬರೆ ಖರೀದಿಗೆ ಯಾರೂ ಬರುತ್ತಿಲ್ಲ. ಜನರಲ್ಲಿ ಇನ್ನೂ ಮೊದಲಿನಂತೆ ಉತ್ಸಾಹ ಬರುತ್ತಿಲ್ಲ. ಈ ಸಲ ಇಡೀ ವರ್ಷ ನಷ್ಟ ಅನುಭವಿಸುಂತಾಗಿದೆ’ ಎಂದು ಬಟ್ಟೆ ವ್ಯಾಪಾರಿ ಹರೀಶ್‌ ಅಳಲು ತೋಡಿಕೊಂಡರು.

ಎರಡು ದಿನಗಳಿಂದ ರಾಯಚೂರಿನಲ್ಲಿ ಚಳಿ ಆವರಿಸಿದೆ. ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಗುರುವಾರ ದಿನವಿಡೀ ಮೋಡಕವಿದ ವಾತಾವರಣವಿತ್ತು. ಬಿಸಿಲು ವಾತಾವರಣ ಇಲ್ಲದೆ ಮೈ ಮನ ಮುದುರಿಕೊಳ್ಳುವಂತಾಗಿದೆ. ಸದಾ ಬಿಸಿಲು ಬಿಸಿಗೆ ಹೊಂದಿಕೊಂಡಿದ್ದ ವಯೋವೃದ್ಧರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಮಾರುಕಟ್ಟೆ ಮಳಿಗೆಗಳು ಮತ್ತು ಬೀದಿ ಮಳಿಗೆಗಳಲ್ಲಿ ವ್ಯಾಪಾರವಿಲ್ಲ. ಗ್ರಾಮೀಣ ಜನರು ಖರೀದಿಗಾಗಿ ಬರದಿರುವುದು ಇದಕ್ಕೆ ಕಾರಣ. ಆದರೆ, ರಾಯಚೂರು ನಗರದ ಜನರು ಬಟ್ಟೆಬರೆ ಖರೀದಿಗಾಗಿ ಶಾಪಿಂಗ್‌ ಮಾಲ್‌ಗಳತ್ತ ಹೋಗುತ್ತಿದ್ದಾರೆ. ರಿಯಾಯ್ತಿಯಲ್ಲಿ ಮಾರಾಟವಾಗುವ ಸರಕುಗಳನ್ನು ಕುತೂಹಲಕ್ಕಾಗಿ ಹೋಗಿ ನೋಡಿ ಬರುತ್ತಿದ್ದಾರೆ. ಶಾಪಿಂಗ್‌ ಮಾಲ್‌ನಲ್ಲೂ ವ್ಯಾಪಾರ ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.