ADVERTISEMENT

ರಾಯಚೂರು: ಸಹಜ ಸ್ಥಿತಿಗೆ ಮರಳಿದ ಜನಜೀವನ

ಬಾಗಿಲು ತೆರೆದ ದೇವಸ್ಥಾನ, ಮಸೀದಿ, ಚರ್ಚ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 14:55 IST
Last Updated 8 ಜೂನ್ 2020, 14:55 IST
ರಾಯಚೂರಿನ ಎನ್‌‌ಜಿಒ ಕಾಲೋನಿಯ ವೆಂಕಟರಮಣ ದೇವಸ್ಥಾನ
ರಾಯಚೂರಿನ ಎನ್‌‌ಜಿಒ ಕಾಲೋನಿಯ ವೆಂಕಟರಮಣ ದೇವಸ್ಥಾನ   

ರಾಯಚೂರು: ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಹಾಗೂ ಮಠಗಳು ಸೋಮವಾರದಿಂದ ಸಾರ್ವಜನಿಕರಿಗೆ ದರ್ಶನಕ್ಕಾಗಿ ತೆರೆದುಕೊಂಡಿದ್ದು, ಎರಡೂವರೆ ತಿಂಗಳುಗಳ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಕೋವಿಡ್‌ ಸೋಂಕು ಹರಡದಂತೆ ಅಂತರ ಕಾಯ್ದುಕೊಳ್ಳುವುದು ಮತ್ತು ಶುಚಿತ್ವ ಕಾಪಾಡುವುದಕ್ಕಾಗಿ ಎಲ್ಲ ಧಾರ್ಮಿಕ ಸ್ಥಾನಗಳಲ್ಲಿಯೂ ಪೂರ್ವದಲ್ಲಿಯೇ ಸಿದ್ಧತೆ ಮಾಡಿರುವುದು ಕಂಡುಬಂತು. ಭಕ್ತರು ಸರದಿಯಲ್ಲಿ ನಿಲ್ಲುವುದಕ್ಕೆ ಗುರುತು ಹಾಕಲಾಗಿತ್ತು. ಕೈ ತೊಳೆಯುವುದಕ್ಕೆ ವ್ಯವಸ್ಥೆ ಇತ್ತು. ಸ್ಯಾನಿಟೈಜರ್‌ ಇದ್ದರೂ ಕೆಲವು ನಿರಾಕರಿಸುವ ಅನಿವಾರ್ಯತೆಯೂ ಇತ್ತು.

ದೀರ್ಘಕಾಲದ ಬಳಿಕ ತೆರೆದಿರುವ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಜನರು ಇನ್ನೂ ಕೋವಿಡ್‌ ಆತಂಕದಲ್ಲಿದ್ದಾರೆ. ದಟ್ಟಣೆ ಆಗುವ ಕಡೆಗಳಲ್ಲಿ ಸಂಚರಿಸಲು ಬಹಳಷ್ಟು ಜನರು ಹಿಂದೇಟು ಹಾಕುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಂಡು ಪ್ರಾರ್ಥಿಸುತ್ತಿರುವುದು ವಿಶೇಷವಾಗಿತ್ತು. ಮೊದಲಿನಂತೆ ಪ್ರಸಾದ ಅಥವಾ ತೀರ್ಥ ಹಂಚಲಿಲ್ಲ. ಮಂಗಳಾರತಿ ಸೇವೆ ಮಾತ್ರ ಇತ್ತು.

ADVERTISEMENT

ರಾಯಚೂರಿನ ನಗರೇಶ್ವರ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ, ನವೋದಯ ಪ್ಯಾಂಪಸ್‌ನ ವೆಂಕಟೇಶ್ವರ ದೇವಸ್ಥಾನ, ವಿವಿಧ ಚರ್ಚ್‌ಗಳು, ಮಸೀದಿ, ದರ್ಗಗಳಲ್ಲಿ ಭಕ್ತರು ಎಂದಿನಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಿತ್ಯ ರೂಢಿಗಳಿಂದ ದೀರ್ಘಕಾಲ ದೂರ ಉಳಿದಿದ್ದ ಪೂಜಾರಿಗಳು, ಅರ್ಚಕರು, ಮೌಲ್ವಿಗಳು ಹಾಗೂ ಚರ್ಚ್‌ಗಳ ಫಾದರ್‌ಗಳು ಮತ್ತೆ ಧಾರ್ಮಿಕ ಕೇಂದ್ರದತ್ತ ಮುಖ ಮಾಡಿದ್ದಾರೆ.ಎಲ್ಲರೂ ಭಕ್ತಿಯಿಂದ ದೇವರನ್ನು ಪ್ರಾರ್ಥಿಸುತ್ತಿದ್ದಾರೆ.

ಹೋಟೆಲ್‌ಗಳೆಲ್ಲ ತೆರೆದುಕೊಂಡಿದ್ದರೂ ಜನರು ವಿರಳವಾಗಿದ್ದರು. ದರ್ಶಿನಿಗಳಲ್ಲಿ ಮಾತ್ರ ಮುಗಿಬಿದ್ದಿರುವ ದೃಶ್ಯ ಕಂಡುಬಂತು. ಮಾಸ್ಕ್‌ ಧರಿಸಿದರೂ, ಅಂತರ ಕಾಪಾಡುವುದು ಹೊಟೇಲ್‌ಗಳಲ್ಲಿ ದುಸ್ತರ ಎನ್ನುವ ಸ್ಥಿತಿ ಇದೆ. ಅಂಗಡಿಗಳನ್ನು ತೆರೆದುಕೊಳ್ಳಲು ಮೊದಲಿನಂತೆ ಸಮಯದ ನಿರ್ಬಂಧವಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಜನ, ವಾಹನಗಳ ಸಂಚಾರ ಮತ್ತೆ ಶುರುವಾಗಿದೆ. ಮಾರುಕಟ್ಟೆಯಲ್ಲಿ ವಾಹನಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಪರದಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.