ADVERTISEMENT

ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅವಶ್ಯಕ: ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 6:11 IST
Last Updated 7 ಜುಲೈ 2025, 6:11 IST
ರಾಯಚೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಹಾಗೂ ಎಲುಬಿನ ಸಾಂದ್ರತೆ ತಪಾಸಣೆ ಶಿಬಿರವನ್ನು ಡಾ. ಸಿ.ಆರ್. ಚಂದ್ರಶೇಖರ ಉದ್ಘಾಟಿಸಿದರು. ಸ್ಮೀತಾ ಅಕ್ಕ, ಡಾ. ಅನಿರುದ್ಧ ಕುಲಕರ್ಣಿ, ಡಾ. ಮನೋಹರ ಪತ್ತಾರ್, ಬಿ.ಪಾಟೀಲ ಉಪಸ್ಥಿತರಿದ್ದರು
ರಾಯಚೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಹಾಗೂ ಎಲುಬಿನ ಸಾಂದ್ರತೆ ತಪಾಸಣೆ ಶಿಬಿರವನ್ನು ಡಾ. ಸಿ.ಆರ್. ಚಂದ್ರಶೇಖರ ಉದ್ಘಾಟಿಸಿದರು. ಸ್ಮೀತಾ ಅಕ್ಕ, ಡಾ. ಅನಿರುದ್ಧ ಕುಲಕರ್ಣಿ, ಡಾ. ಮನೋಹರ ಪತ್ತಾರ್, ಬಿ.ಪಾಟೀಲ ಉಪಸ್ಥಿತರಿದ್ದರು   

ರಾಯಚೂರು: ನಿತ್ಯದ ಒತ್ತಡದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ, ಯೋಗ, ವ್ಯಾಯಾಮ ಅವಶ್ಯಕವಾಗಿದೆ ಎಂದು ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಹೇಳಿದರು.

ಇಲ್ಲಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆರ್‌ಇಆರ್‌ಎಫ್ ಮತ್ತು ಬ್ರಹ್ಮಕುಮಾರೀಸ್ ಹಾಗೂ ಕೆ. ಸುವಿಧಾ ಸೂಪರ್‌ ಸ್ಪೆಷಾಲಿಟಿ ಅರ್ಥೋಪೆಡಿಕ್ ಮತ್ತು ಮೆಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಹಾಗೂ ಎಲುಬಿನ ಸಾಂದ್ರತೆ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು. ಆರೋಗ್ಯ ತಪಾಸಣೆಗಾಗಿ ಸಮಯ ನಿಗದಿಪಡಿಸಿ ಕಾರ್ಯ ಚಟುವಟಿಕೆ ಹಾಕಿಕೊಳ್ಳಬೇಕು’ ಎಂದರು.

ADVERTISEMENT

‘ಚೈತನ್ಯ ಮತ್ತು ಮನಸ್ಸು ನಮ್ಮ ದೇಹದಲ್ಲಿ ಅಡಗಿವೆ. ದಿನನಿತ್ಯದ ಅವಸರದ ಕಾರ್ಯ ಚಟುವಟಿಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ರಕ್ತದೊತ್ತಡ (ಬಿಪಿ), ಸಕ್ಕರೆ ಕಾಯಿಲೆ, ಎಲುಬು, ಕೀಲು ನೋವುಗಳು ಗುಪ್ತವಾಗಿ ಅವಿತುಕೊಂಡಿರುತ್ತವೆ. ವೈದ್ಯರ ಬಳಿ ತಪಾಸಣೆ ನಡೆದಾಗ ರೋಗಗಳು ಕಾಣಿಸುತ್ತವೆ. ಹೀಗಾಗಿ ಎಲ್ಲರೂ ಆರೋಗ್ಯದತ್ತ ಲಕ್ಷ್ಯ ವಹಿಸಬೇಕು’ ಎಂದರು.

‘ಕುಟುಂಬದಲ್ಲಿ ಸಾಮಾಜಿಕವಾಗಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಮಾನಸಿಕ ಒತ್ತಡ, ಆಧುನಿಕ ಜೀವನಶೈಲಿ ಅಳವಡಿಕೆಯಿಂದ ದೈಹಿಕ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ’ ಎಂದರು.

‘ಇಂದಿನ ಜನರು ಹಣ ಗಳಿಕೆ ಹಿಂದೆ ಬೀಳುತ್ತಾರೆ. ನಂತರ ಕೋಪ ಹೆಚ್ಚುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಶೇ 80ರಷ್ಟು ಆರೋಗ್ಯ ಭಾಗ್ಯ ಇಲ್ಲದಂತೆ ಆಗಿದೆ. ಜೀವನದಲ್ಲಿ ಆರೋಗ್ಯ ಭಾಗ್ಯ ಬಹಳ ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ ಇಡೀ ಜೀವನ ಶೈಲಿ, ಅದರ ಕಾರ್ಯ ನಿರ್ವಹಣೆ ಸರಿಯಾಗಿ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ಮೀತಾ ಅಕ್ಕ, ಡಾ. ಅನಿರುದ್ಧ ಕುಲಕರ್ಣಿ, ಡಾ. ಮನೋಹರ ಪತ್ತಾರ್, ಬಿ. ಪಾಟೀಲ ಉಪಸ್ಥಿತರಿದ್ದರು. ನಂತರ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಯಿತು.

ಶಿಬಿರದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಯಿತು
ಚೈತನ್ಯ ಮತ್ತು ಮನಸ್ಸು ನಮ್ಮ ದೇಹದಲ್ಲಿ ಅಡಗಿವೆ ಹಣದಿಂದ ಕೋಪ, ಆಸೆ, ದುಃಖ ಹೆಚ್ಚುತ್ತದೆ ಅವಸರದ ಕಾರ್ಯದಿಂದ ಅನಾರೋಗ್ಯ ಕಂಡುಬರುವುದಿಲ್ಲ
ಮನುಷ್ಯನ ಬಳಿ ಹಣ ಸಂಪತ್ತು ಜಾಸ್ತಿಯಾದಂತೆ ಆಸೆ ಕೋಪ ದುಃಖ ಮತ್ಸರ ಹೆಚ್ಚಾಗುತ್ತದೆ
ಡಾ.ಸಿ.ಆರ್. ಚಂದ್ರಶೇಖರ ಮನೋವೈದ್ಯ

‘ಮನೆಯ ಆಹಾರ ಸೇವಿಸಿ’

‘ಇತ್ತೀಚಿನ ದಿನಗಳಲ್ಲಿ ಜನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಹೆಚ್ಚುತ್ತಿದೆ. ಬಹುಮುಖ್ಯವಾಗಿ ನಾವು ಸೇವಿಸುತ್ತಿರುವ ಆಹಾರ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮನೆಯಲ್ಲಿ ಸಿದ್ಧವಾಗುವ ಆಹಾರ ಸೇವನೆ ಮೂಲಕ ಕುಟುಂಬ ವ್ಯವಸ್ಥೆ ಗಟ್ಟಿಯಾಗಿಸಿಕೊಳ್ಳುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಡಾ. ಸಿ.ಆರ್. ಚಂದ್ರಶೇಖರ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.