ರಾಯಚೂರು: ‘ಸಾಮಾಜಿಕ ನ್ಯಾಯದ ವಿರುದ್ಧದ ಮತೀಯ ಶಕ್ತಿಗಳು ಹೆಚ್ಚು ಜಾಗೃತವಾಗಿವೆ. ಹಿಂದುಳಿದ ವರ್ಗಗಳ ಸಮುದಾಯದವರು ಹಿಂದಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಇರುವ ಅಗತ್ಯವಿದೆ’ ಎಂದು ಅಜೀಂ ಪ್ರೇಮ್ ಜಿ ಸಂಸ್ಥೆಯ ಪ್ರಾಧ್ಯಾಪಕ ಎ. ನಾರಾಯಣ ಹೇಳಿದರು.
ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2 ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ?’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘2015–2016ಲ್ಲಿ ಮೊದಲ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಿದೆ. ಈಗ ನಡೆಯುತ್ತಿರುವುದು ಎರಡನೇ ಸಮೀಕ್ಷೆಯಾಗಿದೆ. ಸಮೀಕ್ಷೆ ಮೂಲಕ ದತ್ತಾಂಶ ಸಂಗ್ರಹಿಸಿ ಅಭಿವೃದ್ಧಿಗೆ ನೀತಿ ರೂಪಿಸಲು ಹಾಗೂ ಪ್ರವರ್ಗಗಳ ಪುನರ್‌ವಿಂಗಡೆ ಮಾಡಲು ಹೊಸ ಸಮೀಕ್ಷೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
‘ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕೂ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. 1958ರಲ್ಲಿ ಕಾಕಾಸಾಹೇಬ್ ಕಾಲೇಕರ್ ಆಯೋಗ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರ ಒಪ್ಪಿಸಿತು. ಆದರೆ, ಕಾಕಾಸಾಹೇಬರೇ ಇದನ್ನು ಒಪ್ಪುವುದಿಲ್ಲ ಎನ್ನುವ ಹೇಳಿಕೆಯನ್ನೂ ನೀಡಿದರು. ಹಿಂದುಳಿದ ವರ್ಗಗಳ ಮುಖಂಡರೂ ಇದನ್ನು ಪ್ರಶ್ನಿಸಲಿಲ್ಲ. ಹೀಗಾಗಿ ಅದು ಜಾರಿಗೆ ಬರಲಿಲ್ಲ’ ಎಂದು ವಿವರಿಸಿದರು.
‘1978ರಲ್ಲಿ ಜನತಾ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗಗಳ ಸಮೀಕ್ಷೆ ವಿಚಾರ ಮುನ್ನೆಲೆಗೆ ಬಂದಿತು. 1989ರಲ್ಲಿ ಕೇಂದ್ರದಲ್ಲಿ ವಿ.ಪಿ.ಸಿಂಗ್ ಅಧಿಕಾರಕ್ಕೆ ಬಂದು ಮಂಡಲ ವರದಿ ಜಾರಿಗೆ ಮುಂದಾಯಿತು. ಆದರೆ, ಸಾಮಾಜಿಕ ನ್ಯಾಯದ ವಿರುದ್ಧ ಶಕ್ತಿಗಳು ಒಂದಾದವು. ವರದಿಯನ್ನು ಅರ್ಥೈಸಿಕೊಳ್ಳದ ಒಬಿಸಿ ಮುಖಂಡರೂ ವಿರೋಧಿಸಿದರು. ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋದರು. ಕೋರ್ಟ್ ತಡೆಯಾಜ್ಞೆ ನೀಡಿತು’ ಎಂದು ತಿಳಿಸಿದರು.
‘1999ರಲ್ಲಿ ಸುಪ್ರೀಕೋರ್ಟ್ ಪೂರ್ಣ ಅಧ್ಯಯನ ವರದಿಯನ್ನು ಒಪ್ಪಿತು. ಆದರೆ, ಸರ್ಕಾರ ಬಿದ್ದು ಹೋಗಿತ್ತು. ಆರೋಗದ ವರದಿ ನ್ಯಾಯಯುತವಾಗಿದ್ದರೂ ಮತೀಯ ಶಕ್ತಿಗಳು ಮೇಲುಗೈ ಸಾಧಿಸಿದವು’ ಎಂದು ಬೇಸರ ವ್ಯ್ಕಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ ಶಾಂತಪ್ಪ, ಮಾತನಾಡಿದರು.
ಆರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ದೇವರಾಜುಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೆ.ಹನುಮಂತಪ್ಪ ಯಾದವ, ಆಂಜನೇಯ, ಕೆ.ಕೃಷ್ಣಪ್ಪ ಲಕ್ಷ್ಮೀರೆಡ್ಡಿ, ಸಣ್ಣಭತ್ತಪ್ಪ, ಮಹ್ಮದ್ ಶಾಲಂ, ಜಯಣ್ಣ , ಜಯಂತರಾವ್ ಪತಂಗೆ, ನಾಗರಾಜ, ಸುರೇಖಾ, ಮಲ್ಲಿಕಾರ್ಜುನ ದಖ್ಖಲದಿನ್ನಿ ಉಪಸ್ಥಿತರಿದ್ದರು.
ಜಾಗೃತ ಕರ್ನಾಟಕ, ರಾಯಚೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ, ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನದ ವತಿಯಿಂದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ದೇಶದಲ್ಲಿ ಇರುವುದು ಒಂದೇ ಬಣ್ಣ ಎನ್ನುವಂತೆ ಬಿಂಬಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಹಳದಿ ಬಣ್ಣ ಬಹುತ್ವದ ಸಂಕೇತವಾಗಿದ್ದು ಸರ್ವವ್ಯಾಪಿಯಾಗಬೇಕು.ಎ. ನಾರಾಯಣ ಅಜೀಂ ಪ್ರೇಮಜಿ ಸಂಸ್ಥೆಯ ಪ್ರಾಧ್ಯಾಪಕ
ಸಂವಿಧಾನ ಅರ್ಥೈಸಿಕೊಳ್ಳಿ: ಸಂಸದ ‘ಸಂವಿಧಾನವು ಜನಸಾಮಾನ್ಯರ ಕನಸಿನ ಹೊತ್ತಿಗೆಯಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರೂ ಆಳವಾಗಿ ಓದಬೇಕು. ಸಂವಿಧಾನದ ಅರ್ಥಗರ್ಭಿತ ಮೌನಗಳನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಸಂಸದ ಕುಮಾರ ನಾಯಕ ಹೇಳಿದರು. ‘ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನು ಸಂವಿಧಾನದಲ್ಲೇ ಉಲ್ಲೇಖಿಸಲಾಗಿದೆ. ಎರಡನೇ ಬಾರಿಗೆ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಇದರಿಂದ ಆರ್ಥಿಕ ಸ್ಥಿತಿಗತಿಯನ್ನು ಅರಿತುಕೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.
ಸಮೀಕ್ಷೆಗಳು ನೀತಿ ನಿರೂಪಣೆಗೆ ಅನುಕೂಲ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ‘ಆಧುನಿಕತೆಯ ಪರಿಣಾಮ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಿತ್ತು. ಆದರೆ ಜಾತಿ ವ್ಯವಸ್ಥೆ ಬಲವಾಗಿ ಬೇರೂರುತ್ತಿದೆ. ಜಾತಿ ವ್ಯವಸ್ಥೆ ಪ್ರಬಲವಾಗದಿರಲಿ ಎನ್ನುವ ಕಾರಣಕ್ಕಾಗಿಯೇ 1931ರಲ್ಲಿ ಜಾತಿಗಣತಿ ಸ್ಥಗಿತಗೊಳಿಸಲಾಗಿತ್ತು’ ಎಂದು ತಿಳಿಸಿದರು. ‘ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲೇ ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಸಮೀಕ್ಷೆ ಮೀಸಲಾತಿಗೆ ಸೀಮಿತವಾಗಿಲ್ಲ. ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.