ADVERTISEMENT

ಮುದಗಲ್ | ಹಳ್ಳಿಗಳಿಗೆ ಹಳೆ ಬಸ್: ಅಪಘಾತ ಪ್ರಕರಣ ಹೆಚ್ಚಳ

ಲಿಂಗಸುಗೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಜನರ ಪ್ರಯಾಣಕ್ಕೆ ಖಾಸಗಿ ವಾಹನಗಳೇ ಆಸರೆ

ಡಾ.ಶರಣಪ್ಪ ಆನೆಹೊಸೂರು
Published 11 ಫೆಬ್ರುವರಿ 2025, 5:09 IST
Last Updated 11 ಫೆಬ್ರುವರಿ 2025, 5:09 IST
ಫೆ.6ರಂದು ಮುದಗಲ್ ಹೊರ ವಲಯದಲ್ಲಿ ಎಕ್ಸೆಲ್ ತುಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವುದು
ಫೆ.6ರಂದು ಮುದಗಲ್ ಹೊರ ವಲಯದಲ್ಲಿ ಎಕ್ಸೆಲ್ ತುಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವುದು   

ಮುದಗಲ್: ಲಿಂಗಸುಗೂರು ಬಸ್ ಘಟಕದಿಂದ ತಾಲ್ಲೂಕಿನ ಹಳ್ಳಿಗಳಿಗೆ ಹಳೆ ಬಸ್‌ಗಳನ್ನು ಬಿಡಲಾಗುತ್ತಿದೆ. ಆದ್ದರಿಂದ ರಸ್ತೆಯಲ್ಲಿ ಕೆಟ್ಟು ನಿಂತು, ಎಕ್ಸೆಲ್ ತುಂಡಾಗಿ ನೆಲಕ್ಕೆ ಉರುಳಿ ಗ್ರಾಮೀಣ ಜನರ ನೆಮ್ಮದಿ ಕೆಡಿಸುತ್ತಿವೆ.

ಹಳ್ಳಿಗಳಿಗೆ ಬಿಡುವ ಬಸ್‌ಗಳ ಕಿಟಕಿ ಹಾಗೂ ಬಾಗಿಲುಗಳಿಂದ ಶಬ್ದ ಬರುವುದು ಹಾಗೂ ವಾಯು ಮಾಲಿನ್ಯ ಸಾಮಾನ್ಯವಾಗಿದೆ. ಇನ್ನೂ ಕೆಲವು ಬಸ್‌ಗಳು ನಿಗದಿತ ಕಿ.ಮೀ ಕ್ರಮಿಸಿ ಆಗಾಗ ದುರಸ್ತಿಗೆ ಒಳಗಾಗುತ್ತಿವೆ. ಮಳೆಗಾಲದಲ್ಲಿ ಚಾವಣಿ ತೊಟ್ಟಿಕ್ಕುತ್ತದೆ.

ಫೆಬ್ರುವರಿ 6ರಂದು ಮುದಗಲ್ ಹೊರ ವಲಯದಲ್ಲಿ ಬಸ್ ಬಿದ್ದು 69 ಜನರು ಗಾಯಗೊಂಡಿದ್ದರು. ಎರಡು ತಿಂಗಳುಗಳ ಹಿಂದೆ ಆನೆಹೊಸೂರು ಗ್ರಾಮದ ಹೊರ ವಲಯದಲ್ಲಿ ಎಕ್ಸೆಲ್ ತುಂಡಾಗಿ ಬಸ್ ಸೇತುವೆ ಕೆಳಗೆ ಇಳಿದಿತ್ತು. ಮುದಗಲ್-ಅಂಕಲಗಿ ಮಠ ರಸ್ತೆಯಲ್ಲಿ ಟ್ರ್ಯಾಕ್ಟರ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು. ಇದಕ್ಕೆ ಹಳೆ ಬಸ್‌ ಬಿಟ್ಟಿರುವುದೇ ಕಾರಣ ಎಂದು ಜನ ದೂರುತ್ತಾರೆ.

ADVERTISEMENT

ತಾಲ್ಲೂಕಿನ ಆಶಿಹಾಳ, ನಂದಿಹಾಳ, ಕಿಲಾರಹಟ್ಟಿ, ಕನಸಾವಿ, ಕೋಮಲಾಪುರ, ಕಾಚಾಪುರ, ಉಪ್ಪಾರ ನಂದಿಹಾಳ, ಅಡವಿಬಾವಿ, ಬೊಮ್ಮನಾಳ, ಲಕ್ಕಿಹಾಳ ಸೇರಿದಂತೆ ಇನ್ನೂ ಎಷ್ಟೋ ಗ್ರಾಮಗಳ ಜನರಿಗೆ ಪ್ರಯಾಣಕ್ಕೆ ಇಂದಿಗೂ ಟೆಂಪೋ, ಕ್ರೂಸರ್, ಟಾಟಾ ಏಸ್‌ನಂಥ ವಾಹನಗಳೇ ಅನಿವಾರ್ಯವಾಗಿವೆ. ಅವು ಇಲ್ಲದಿದ್ದರೆ ಜನರ ಪರದಾಟ ಇನ್ನೂ ಹೆಚ್ಚಾಗಿರುತ್ತಿತ್ತು. ಬಸ್‌ಗಳ ಕೊರತೆ ಹಾಗೂ ಕಳಪೆ ಬಸ್‌ಗಳಿಂದಾಗಿ ಗ್ರಾಮೀಣ ಭಾಗದಿಂದ ತಾಲ್ಲೂಕು, ಜಿಲ್ಲಾ ಕೇಂದ್ರದ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು.

ಹದಗೆಟ್ಟ ರಸ್ತೆಗಳು, ಮತ್ತೊಂದೆಡೆ ಕೆಟ್ಟು ನಿಲ್ಲುವ ಬಸ್‌ಗಳಿಂದ ವಿದ್ಯಾರ್ಥಿಗಳು, ಪಟ್ಟಣಕ್ಕೆ ಬರುವ ಪ್ರಯಾಣಿಕರು ಹೈರಾಣಾಗಿದ್ದಾರೆ. ಇನ್ನೂ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯೇ ಇಲ್ಲದಾಗಿದೆ ಎಂದು ಲಕ್ಷ್ಮಣ ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.