ADVERTISEMENT

ಕವಿತಾಳ | ಈರುಳ್ಳಿ ದರ ಕುಸಿತ: ರೈತರಿಗೆ ಸಂಕಷ್ಟ

ಮಾರುಕಟ್ಟೆಗೆ ಸಾಗಿಸದೆ ಹೊಲದಲ್ಲಿಯೇ ಕುರಿ ಮೇಯಿಸಿದ ಅನ್ನದಾತರು

ಎಸ್.ಮಂಜುನಾಥಬಳ್ಳಾರಿ
Published 22 ನವೆಂಬರ್ 2025, 6:33 IST
Last Updated 22 ನವೆಂಬರ್ 2025, 6:33 IST
ಕವಿತಾಳ ಸಮೀಪದ ಅಮೀನಗಡದ ರೈತ ರಶೀದ್ ಬಂಕದ್‌ ಈರುಳ್ಳಿ ಗುಡ್ಡೆ ಹಾಕಿರುವುದು
ಕವಿತಾಳ ಸಮೀಪದ ಅಮೀನಗಡದ ರೈತ ರಶೀದ್ ಬಂಕದ್‌ ಈರುಳ್ಳಿ ಗುಡ್ಡೆ ಹಾಕಿರುವುದು   

ಕವಿತಾಳ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಪರಿಣಾಮ ರೈತರು ಸಂಕಷ್ಟ ಅನುಭವಿಸುವಂತಾಗಿದೆ. 

ಈರುಳ್ಳಿ ಮಾರಾಟದಿಂದ ಬರುವ ಹಣ ಕಾರ್ಮಿಕರ ಕೂಲಿ ಮತ್ತು ಸಾಗಾಟ ಮಾಡಲು ವಾಹನ ಬಾಡಿಗೆ ಖರ್ಚಿಗೂ ಸರಿ ಹೋಗುತ್ತಿಲ್ಲ. ಹೀಗಾಗಿ ಜಮೀನುಗಳಲ್ಲಿ ಕುರಿ ಮೇಯಿಸಲು ಬಿಟ್ಟಿದ್ದೇವೆ ಎಂದು ರೈತರು ತಿಳಿಸಿದರು.

ಪಟ್ಟಣ ಸೇರಿದಂತೆ ಸಮೀಪದ ಪಾಮನಕಲ್ಲೂರು, ಅಮೀನಗಡ, ಕೊಟೇಕಲ್‌, ವಟಗಲ್‌ ಮತ್ತು ತುಪ್ಪದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಈರುಳ್ಳಿ ಬೆಳೆದಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಈರುಳ್ಳಿ ಗುಣಮಟ್ಟ ಆಧರಿಸಿ ₹ 300 ರಿಂದ ₹ 900 ವರೆಗೆ ಮಾರಾಟವಾಗುತ್ತಿದೆ.

ADVERTISEMENT

‘ರಸಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರ ಖರ್ಚು ಸೇರಿದಂತೆ ಪ್ರತಿ ಎಕರೆಗೆ ₹ 35 ರಿಂದ ₹ 40 ಸಾವಿರ ಖರ್ಚು ತಗುಲಿದೆ. ಪ್ರತಿ ಎಕರೆಗೆ ಅಂದಾಜು 70 ಕ್ವಿಂಟಲ್‌ ಇಳುವರಿ ಬಂದಿದ್ದು, ₹ 21 ಸಾವಿರ ಕೈ ಸೇರಿದೆ. ಹೀಗಾಗಿ ಕಟಾವು ಮಾಡದೆ ಹೊಲದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದೇವೆ’ ಎಂದು ತುಪ್ಪದೂರು ಗ್ರಾಮದ ರೈತ ಶಿವಕುಮಾರ ದಳಪತಿ ಹೇಳಿದರು.

‘ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದ ಬಹುತೇಕ ರೈತರು ಮತ್ತಷ್ಟು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ತಾವು ಕಟಾವು ಮಾಡದೆ ಹಾಗೆ ಬಿಟ್ಟಿದ್ದು, ಜಮೀನಿನಲ್ಲಿ ಕೊಳೆಯುತ್ತಿದೆ’ ಎಂದು ರೈತರಾದ ದೇವಪ್ಪ ಮಡಿವಾಳ, ಅಯ್ಯಪ್ಪ ಮತ್ತು ಸಿದ್ದಪ್ಪ ಮಡಿವಾಳ ಹೇಳಿದರು.

ದರ ಕುಸಿತದ ಪರಿಣಾಮ ರಸಗೊಬ್ಬರ ಕ್ರಿಮಿನಾಶಕ ಕೂಲಿಕಾರ್ಮಿಕರ ಖರ್ಚು ಭರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು.
–ರಶೀದ್ ಸಾಬ್‌ ಬಂಕದ್‌, ಅಮೀನಗಡ ಗ್ರಾಮದ ರೈತ
ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ 196 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಪ್ರೋತ್ಸಾಹಧನ ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸಲಾಗುವುದು. ನಷ್ಟ ಪರಿಹಾರದ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ
–ನೀಲಕಂಠ, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಪಾಮನಕಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.