ADVERTISEMENT

ಲಿಂಗಸುಗೂರು: ಯಳಗುಂದಿಗೆ ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 3:27 IST
Last Updated 27 ಜುಲೈ 2024, 3:27 IST
ಲಿಂಗಸುಗೂರು ತಾಲ್ಲೂಕಿನ ಕಡದರಗಡ್ಡಿಯಲ್ಲಿ ಕುಟುಂಬಸ್ಥರು ಹಕ್ಕುಪತ್ರ ಪ್ರದರ್ಶಿಸಿದರು
ಲಿಂಗಸುಗೂರು ತಾಲ್ಲೂಕಿನ ಕಡದರಗಡ್ಡಿಯಲ್ಲಿ ಕುಟುಂಬಸ್ಥರು ಹಕ್ಕುಪತ್ರ ಪ್ರದರ್ಶಿಸಿದರು   

ಲಿಂಗಸುಗೂರು: ತಾಲ್ಲೂಕಿನ ಕೃಷ್ಣಾ ನದಿಯ ಮ್ಯಾದರಗಡ್ಡಿ, ಕರಡಕಲ್ಲಗಡ್ಡಿ, ವಂಕಮ್ಮನಗಡ್ಡಿಯ ಸಂತ್ರಸ್ತರಿಗೆ ನಡುಗಡ್ಡೆ ಗ್ರಾಮ ಯಳಗುಂದಿ ಬಳಿಯ ಸರ್ಕಾರಿ ಜಮೀನಿನಲ್ಲಿ ನಿವೇಶನಗಳನ್ನು ಹಂಚಿ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು. ಖಾಸಗಿ ವ್ಯಕ್ತಿಯೊಬ್ಬರು ಯಳಗುಂದಿಗೆ ಸ್ಥಳಾಂತರಗೊಂಡರೆ ಜೀವ ಉಳಿಸಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಹಕ್ಕುಪತ್ರ ಸಮೇತ ಯಳಗುಂದಿ ಜಮೀನಿನಲ್ಲಿ ಭೂಮಿ ಪೂಜೆ ನೆರವೇರಿಸುತ್ತಿದ್ದಂತೆ ಸರ್ವೆ ನಂಬರ್ 19ರಲ್ಲಿ ಜಮೀನು ಮಂಜೂರು ಮಾಡಿಸಿಕೊಂಡ ಮಾಲೀಕ ತಕರಾರು ತೆಗೆದರು. ನಮ್ಮ ಜಮೀನಿನಲ್ಲಿ ಮನೆ ಕಟ್ಟುವುದು ಬೇಡ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೆ, ಬೆದರಿಕೆ ಹಾಕಿರುವುದರಿಂದ ತಾತ್ಕಾಲಿಕ ಸ್ಥಳಾಂತರ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಹೆಚ್ಚಿನ ಪ್ರವಾಹ ಬಂದಾಗ ಮುಳುಗಡೆಯಾಗುವ ಕಡದರಗಡ್ಡಿಯ 5 ಕುಟುಂಬಗಳ ಜೊತೆಗೆ ಮ್ಯಾದರಗಡ್ಡಿಯ 6 ಕುಟುಂಬಗಳಿಗೆ ಆಸರೆ ಯೋಜನೆಯಡಿ ಪ್ರವಾಹ ಸಂತ್ರಸ್ತ ಪುನರ್ವಸತಿ ಸಮಿತಿ ಹಕ್ಕುಪತ್ರ ನೀಡಿದೆ. ತಹಶೀಲ್ದಾರ್ ಸ್ವಾಧೀನ ದಾಖಲೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೂಡ ಹಣಕಾಸು ನೆರವು ಆದೇಶ ಪತ್ರ ನೀಡಿದ್ದಾರೆ. ಅಂದಿನಿಂದ ಈ ತನಕ ಯಾವೊಬ್ಬ ಅಧಿಕಾರಿಯೂ ಸಂತ್ರಸ್ತರನ್ನು ಭೇಟಿ ಮಾಡಿಲ್ಲ.

ADVERTISEMENT

‘ನಡುಗಡ್ಡೆಯಲ್ಲಿರುವ ಎಲ್ಲ ಕುಟುಂಬಸ್ಥರಿಗೆ ನಿವೇಶನದ ಹಕ್ಕುಪತ್ರ ನೀಡಿಲ್ಲ. ಜಾತಿ ಆಧಾರಿತ ಸ್ಥಳಾಂತರ ನಾಟಕ ಕಂಡು ಬೇಸರವಾಗಿದೆ. ಒಪ್ಪೊತ್ತಿನ ಗಂಜಿಗೆ ಬದುಕು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ನಮ್ಮನ್ನು ಶಾಶ್ವತವಾಗಿ ಸ್ಥಳಾಂತರ ಮಾಡಿ, ಇಲ್ಲ ಇರುವಲ್ಲಿಯೇ ಬದುಕು ಕಟ್ಟಿಕೊಳ್ಳಲು ಬಿಟ್ಟುಬಿಡಿ’ ಎಂದು ದೇವಮ್ಮ, ಗದ್ದೆಮ್ಮ ಕಣ್ಣಾಲೆಯಲ್ಲಿ ನೀರು ತುಂಬಿಕೊಂಡು ಅಳಲು ತೋಡಿಕೊಂಡರು.

ರಾಜೀವ್‌ಗಾಂಧಿ ಪಂಚಾಯತ್‍ ರಾಜ್‍ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‍.ಬಿ.ಮುರಾರಿ ಮಾತನಾಡಿ, ‘ನಡುಗಡ್ಡೆ ಜಮೀನು ಭೂ ಸ್ವಾಧೀನದ ಜೊತೆಗೆ ಸುಸಜ್ಜಿತ ಬಡಾವಣೆ ನಿರ್ಮಿಸಿ ಸ್ಥಳಾಂತರಕ್ಕೆ ಹೊರಾಟ ನಡೆಸುತ್ತ ಬಂದಿದೆ. ಪರಿಶಿಷ್ಟರು ಎಂಬ ಕಾರಣಕ್ಕೆ ವಿಳಂಬ ಧೋರಣೆ ಮಾಡಿದ್ದು, ಅಂಬೇಡ್ಕರ್ ಆಶಯಕ್ಕೆ ಧಕ್ಕೆಯಾಗಿದೆ. ಶೋಷಿತರಿಗೆ ನ್ಯಾಯ ಸಿಗುವುದು ಕಷ್ಟ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಳಗುಂದಿ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಿವೇಶನ ಹಂಚಿಕೆಗೆ ಪರ್ಯಾಯ ಸರ್ಕಾರಿ ಜಮೀನು ಹುಡುಕಾಟ ನಡೆಸಿದ್ದು, ಸಂತ್ರಸ್ತರ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡಿಯ ಸಂತ್ರಸ್ತರು ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿರುವುದು
ಲಿಂಗಸುಗೂರು ತಾಲ್ಲೂಕಿನ ಯಳಗುಂದಿ ಬಳಿ ನನೆಗುದಿಗೆ ಬಿದ್ದಿರುವ ಕಾಮಗಾರಿ
2019ರಲ್ಲಿ ಯಳಗುಂದಿ ಬಳಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಹಕ್ಕು ಪತ್ರ ನೀಡಲಾಗಿದೆ. ಅಲ್ಲಿನ ವ್ಯಕ್ತಿ ಬೆದರಿಕೆ ಹಾಕುತ್ತಿದ್ದು ಅಧಿಕಾರಿಗಳು ಸ್ಪಂದಿಸುತ್ತಿಲ್ಲ
-ಹುಸೇನಮ್ಮ ಹರಿಜನ ಸಂತ್ರಸ್ತೆ ಕಡದರಗಡ್ಡಿ
ಕೆಲ ಕುಟುಂಬಗಳಿಗೆ ಯಳಗುಂದಿ ಬಳಿ ಸರ್ಕಾರಿ ಜಮೀನಿನ ನಿವೇಶನದ ಹಕ್ಕು ಪತ್ರ ನೀಡಲಾಗಿದೆ. ಈ ಮೂಲಕ ತಾಲ್ಲೂಕು ಆಡಳಿತ ವಂಚಿಸಿದೆ. ಖಾಸಗಿ ವ್ಯಕ್ತಿ ಮನೆ ಕಟ್ಟಲು ಬಿಡುತ್ತಿಲ್ಲ
ಮಲ್ಲಪ್ಪ ಮಾದರ ಸಂತ್ರಸ್ತ ಮ್ಯಾದರಗಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.