ADVERTISEMENT

ಸಿಂಧನೂರು | ಭತ್ತಕ್ಕೆ ಬಡ್ಡೆ ಕೊರೆಯುವ ರೋಗ: ರೈತರಲ್ಲಿ ಆತಂಕ

ಡಿ.ಎಚ್.ಕಂಬಳಿ
Published 15 ಸೆಪ್ಟೆಂಬರ್ 2025, 5:53 IST
Last Updated 15 ಸೆಪ್ಟೆಂಬರ್ 2025, 5:53 IST
ಸಿಂಧನೂರು ತಾಲ್ಲೂಕಿನ ಸಾಸಲಮರಿ ಗ್ರಾಮದ ಜಮೀನೊಂದರಲ್ಲಿ ಭತ್ತಕ್ಕೆ ಬಡ್ಡೆ ಕೊರೆಯುವ ರೋಗ ಬಂದಿರುವುದರಿಂದ ಬುಡ ಕೊಳೆತಿರುವುದನ್ನು ರೈತರೊಬ್ಬರು ತೋರಿಸಿದರು
ಸಿಂಧನೂರು ತಾಲ್ಲೂಕಿನ ಸಾಸಲಮರಿ ಗ್ರಾಮದ ಜಮೀನೊಂದರಲ್ಲಿ ಭತ್ತಕ್ಕೆ ಬಡ್ಡೆ ಕೊರೆಯುವ ರೋಗ ಬಂದಿರುವುದರಿಂದ ಬುಡ ಕೊಳೆತಿರುವುದನ್ನು ರೈತರೊಬ್ಬರು ತೋರಿಸಿದರು   

ಸಿಂಧನೂರು: ತಾಲ್ಲೂಕಿನ ಗೊರೇಬಾಳ, ಸಾಲಗುಂದಾ ಮತ್ತಿತರ ಹೋಬಳಿಗಳಲ್ಲಿ ಭತ್ತದ ಬೆಳೆಗೆ ಬಡ್ಡೆ ಕೊರೆಯುವ ರೋಗ ಕಾಣಿಸಿಕೊಂಡಿದ್ದು, ಇದರಿಂದ ರೈತರಲ್ಲಿ ತೀವ್ರ ಆತಂಕ ಮೂಡಿದೆ.

ಜನವರಿಯಿಂದ ಸೆಪ್ಟೆಂಬರ್‌ವರೆಗೆ ಸರಾಸರಿ ನಿರೀಕ್ಷಿತ ಮಳೆ 385 ಎಂ.ಎಂ ಇದೆ. ಆದರೆ 521 ಎಂ.ಎಂ ಮಳೆಯಾಗಿದೆ. ತಾಲ್ಲೂಕಿನಲ್ಲಿ 1,30,193 ಹೆಕ್ಟೇರ್ ಜಮೀನು ಕೃಷಿಗೆ ಯೋಗ್ಯವಾಗಿದ್ದು, ಅದರಲ್ಲಿ 75,760 ಹೆಕ್ಟೇರ್ ಜಮೀನು ನೀರಾವರಿಗೆ ಒಳಪಟ್ಟಿದೆ. ಒಟ್ಟು 91 ಸಾವಿರ ಹೆಕ್ಟೇರ್ ಗುರಿ ಇತ್ತು. ಈ ಪೈಕಿ 86,628 ಹೆಕ್ಟೇರ್ ಜಮೀನಿನಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದ್ದು, 62,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.

ಹೇಗೋ ಮಾಡಿ ಸಮಯಕ್ಕೆ ಸರಿಯಾಗಿ ಭತ್ತಕ್ಕೆ ರಾಸಾಯನಿಕ ಗೊಬ್ಬರ ಸಹ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಬಡ್ಡೆ ಕೊರೆಯುವ ರೋಗ ಬಂದು ತಲೆಬಿಸಿ ಮಾಡಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

‘ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‍ಗಳನ್ನು ನವೀಕರಣಗೊಳಿಸುವ ಉದ್ದೇಶದಿಂದ ಬೇಸಿಗೆ ಬೆಳೆಗೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಸ್ವತಃ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರೇ ಹೇಳಿದ್ದಾರೆ. ಮುಂಗಾರು ಬೆಳೆಯನ್ನು ಪ್ರತಿ ವರ್ಷಕ್ಕಿಂತ ಒಂದು ತಿಂಗಳು ಪೂರ್ವದಲ್ಲಿಯೇ ಈ ಬಾರಿ ನಾಟಿ ಮಾಡಲಾಗಿದ್ದು, ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ. ಕಣ್ಣಿಗೆ ಕಾಣುವಷ್ಟು ದೂರ ಹಸಿರೇ ಕಾಣುತ್ತಿದೆ. ಮಳೆ ಸಾಕಷ್ಟು ಪ್ರಮಾಣದಲ್ಲಿ ಬಂದಿರುವುದರಿಂದ ಬೆಳೆಗಳು ಚೆನ್ನಾಗಿ ಬೆಳೆದಿವೆ. ಆದರೆ ಇದೀಗ ಬಡ್ಡೆ ರೋಗ ಕಾಣಿಸಿಕೊಂಡಿರುವುದು ತೀವ್ರ ಆಘಾತವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತರಾದ ವೆಂಕೋಬ ಮಾರಲದಿನ್ನಿ, ಮಲ್ಲಯ್ಯ ಮಲ್ಕಾಪುರ, ಬಸವರಾಜ ಮಡಿವಾಳ, ಗುರುಲಿಂಗಪ್ಪ ಪೂಜಾರ್.

‘ಒಂದು ಎಕರೆಗೆ ₹36 ಸಾವಿರ ಲೀಜ್ ಮುಂಗಡ ಹಣ ಕೊಡಬೇಕು. ಒಂದು ಚೀಲ ಯೂರಿಯಾ ಗೊಬ್ಬರ ₹350, ಡಿಎಪಿ ಚೀಲಕ್ಕೆ ₹1,450, ಭತ್ತ ನಾಟಿ ಮಾಡಲು ₹3,600 ಕೂಲಿ ಎಲ್ಲ ಸೇರಿ ಪ್ರತಿ ಎಕರೆಗೆ ₹42 ಸಾವಿರ ತಗಲುತ್ತದೆ. ಈಗ ಬಡ್ಡೆ ಕೊರೆಯುವ ರೋಗ ಬಂದಿದ್ದು, ಇದರಿಂದ ಕಾಳು ಕಟ್ಟುವುದಿಲ್ಲ. ಬಂಜರು ಹುಲ್ಲಾಗಿ ನಿಲ್ಲುತ್ತದೆ. ಆದ್ದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಸೂಕ್ತ ಸಲಹೆ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಮಾರಲದಿನ್ನಿ ಒತ್ತಾಯಿಸಿದ್ದಾರೆ.

ಭತ್ತಕ್ಕೆ ಎಲೆಗೆ ಮಚ್ಚೆ ರೋಗ ಬಂದಿದೆ. ಇದಕ್ಕೆ ರೋಗನಾಶಕ ಸಿಂಪಡಿಸಲು ಈಗಾಗಲೇ ರೈತರಿಗೆ ಶಿಫಾರಸು ಮಾಡಲಾಗಿದೆ. ಏನೇ ಆದರೂ ನಿಯಂತ್ರಣ ಮಾಡಿ ಬೆಳೆ ಅಭಿವೃದ್ಧಿಗೆ ಪ್ರಯತ್ನಿಸುತ್ತೇವೆ
ಮಲ್ಲಿಕಾರ್ಜುನ ನಾಗರಾಳ ಸಹಾಯಕ ಕೃಷಿ ನಿರ್ದೇಶಕ
ಬಡ್ಡೆ ಕೊರೆಯುವ ರೋಗ ನಿವಾರಣೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಕೇಳಿದರೆ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರನ್ನು ಕೇಳುವಂತೆ ಹೇಳುತ್ತಾರೆ.
ಶಿವರಾಜ ಮಾರಲದಿನ್ನಿ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.