ADVERTISEMENT

ರಾಯಚೂರು: ಹೆಚ್ಚಿದ ಬಿಸಿಲ ಧಗೆ, ಸೆಕೆಗೆ ಜನ ತತ್ತರ

ವಿದ್ಯುತ್‌ ಕೈಕೊಟ್ಟ ತಕ್ಷಣ ಜನ ಹೈರಾಣು: ತಂಪು ಪಾನೀಯ ಸೇವಿಸಿದರೂ ನೀಗದ ಬಾಯಾರಿಕೆ

ಚಂದ್ರಕಾಂತ ಮಸಾನಿ
Published 24 ಏಪ್ರಿಲ್ 2025, 5:59 IST
Last Updated 24 ಏಪ್ರಿಲ್ 2025, 5:59 IST
ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಸಮೀಪ ರಸ್ತೆ ಮೇಲೆ ನಿಂತ ಮಳೆ ನೀರು ಸೇವಿಸಿ ಬಾಯಾರಿಕೆ ತಣಿಸಿಕೊಳ್ಳುತ್ತಿರುವ ಎಮ್ಮೆ
ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಸಮೀಪ ರಸ್ತೆ ಮೇಲೆ ನಿಂತ ಮಳೆ ನೀರು ಸೇವಿಸಿ ಬಾಯಾರಿಕೆ ತಣಿಸಿಕೊಳ್ಳುತ್ತಿರುವ ಎಮ್ಮೆ   

ರಾಯಚೂರು: ಜಿಲ್ಲೆಯಲ್ಲಿ ಬಿಸಿಲ ಧಗೆ ಹೆಚ್ಚಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 42 ರಿಂದ 43 ಡಿಗ್ರಿ ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಕಾರಣ ಏಪ್ರಿಲ್‌ ಅಂತ್ಯದವರೆಗೂ ಇದೇ ವಾತಾವರಣ ಮುಂದುವರಿಯಲಿದೆ.

ಬೆಳಗಿನ ಜಾವ ಸೂರ್ಯ ದರ್ಶನ ನೀಡುವ ಮೊದಲೇ ವಿಪರೀತ ಧಗೆಯಾಗುತ್ತಿದೆ. ಬೆಳಿಗ್ಗೆ 8 ಗಂಟೆ ವೇಳೆಗೆ ಬೆಂಕಿ ಬಿಸಿಲು ಆವರಿಸಿಕೊಳ್ಳುತ್ತಿದೆ. ಸಂಜೆ 5 ಗಂಟೆವರೆಗೂ ಬಿಸಿಲಿನ ಕಾವು ಕಡಿಮೆಯಾಗುತ್ತಿಲ್ಲ. ಸುಡು ಬಿಸಿಲಿಗೆ ಕಾಂಕ್ರೀಟ್‌ ಮನೆಗಳು ಕಾದ ಕಾವಲಿಯಂತಾಗುತ್ತಿವೆ. ಗಾಳಿ ವೇಗ ಕಡಿಮೆ ಇರುವ ಕಾರಣ ರಾತ್ರಿಯಾದರೂ ಮನೆಯ ಗೋಡೆಗಳು ತಂಪಾಗುತ್ತಿಲ್ಲ. ಮಧ್ಯಾಹ್ನ ಅಷ್ಟೇ ಅಲ್ಲ ರಾತ್ರಿಯೂ ನಳಗಳಲ್ಲಿ ಬಿಸಿನೀರೇ ಬರುತ್ತಿದೆ.

ಧಗೆಯಿಂದ ಬೆವತು ಜನ ದಿನಕ್ಕೆ ಎರಡು ಮೂರು ಬಾರಿ ಸ್ನಾನ ಮಾಡಿದರೂ ದೇಹ ತಂಪಾಗುತ್ತಿಲ್ಲ. ಜನ ಮಜ್ಜಿಗೆ, ಲಸ್ಸಿ ಹಾಗೂ ಕಲ್ಲಂಗಡಿ ಕಣ್ಣಿನ ಜ್ಯೂಸ್‌ ಮೊರೆ ಹೋಗುತ್ತಿದ್ದಾರೆ. ಆದರೂ ಬಾಯಾರಿಕೆ ಕಡಿಮೆ ಆಗುತ್ತಲೇ ಇಲ್ಲ. ಬಿಸಿಲ ಧಗೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳನ್ನು ಹಿಂಡಿ ಹಿಪ್ಪೆ ಮಾಡಿದೆ.

ADVERTISEMENT

ಮಧ್ಯಾಹ್ನ ಮಾರುಕಟ್ಟೆ ಪ್ರದೇಶ ನಿರ್ಜನವಾಗುತ್ತಿದೆ. ಸಂಜೆಯ ವೇಳೆಗೆ ಮಾತ್ರ ವ್ಯಾಪಾರ ವಹಿವಾಟುಗಳು ಸರಿಯಾಗಿ ನಡೆದಿವೆ. ಜನ ತಲೆಗೆ ಟವೆಲ್ ಹಾಗೂ ಟೊಪ್ಪಿಗೆ ಹಾಕಿಕೊಂಡೆ ಮನೆಯಿಂದ ಹೊರಗಡೆ ಬರಬೇಕಾಗಿದೆ. ಹೆಲ್ಮೆಟ್‌ನಿಂದ ಸೆಕೆ ಹೆಚ್ಚಾಗಿ ತಲೆಕೂದಲು ತೊಯ್ದು ತೊಪ್ಪೆಯಾಗುತ್ತಿವೆ. ಬಿಸಿಲಿಗೆ ತಲೆ ಹಾಗೂ ದೇಹದ ಮೇಲೆ ಗುಳ್ಳೆಗಳು ಎದ್ದು ಆರೋಗ್ಯ ಸಮಸ್ಯೆ ಎದುರಿಸ ತೊಡಗಿದ್ದಾರೆ.

ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ ಪ್ರದೇಶದಲ್ಲಿ ಜನ ಬಿಸಿಲಿನಿಂದ ಬಳಲಿ ಎಳನೀರು ಕುಡಿಯುತ್ತಿದ್ದಾರೆ. ಒಂದು ತೆಂಗಿನಕಾಯಿ ₹ 60 ಇದ್ದರೂ ಜನ ಎಳನೀರು ಸೇವಿಸಿ ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ಕಲ್ಲಂಗಡಿ, ಕರ್ಬೂಜ, ಅನಾನಸ್‌ ಹಾಗೂ ಮಾವಿನ ಹಣ್ಣಿನ ರಸ ಸೇವಿಸಿ ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

‘ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದರೂ ಬಿಸಿಲ ಧಗೆ ಕಡಿಮೆಯಾಗುತ್ತಿಲ್ಲ. ಜೂನ್‌ ಮೊದಲ ವಾರದವರೆಗೂ ರಣ ಬಿಸಿಲು ಮುಂದುವರಿಯಲಿದೆ. ಸಾರ್ವಜನಿಕರು ಬಿಸಿಲಲ್ಲಿ ಮನೆಗಳಿಂದ ಹೊರಬರದೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ’ ಎನ್ನುತ್ತಾರೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಶಾಂತಪ್ಪ.

ನಗರದಲ್ಲಿ ಆರು ಕಡೆ ‘ಅಮೃತ ನೆರಳು’ ಕುಟೀರ ನಿರ್ಮಿಸಿ ಅದರಲ್ಲಿ ಮಣ್ಣಿನ ಗಡಿಗೆಗಳಲ್ಲಿ ತಣ್ಣನೆಯ ನೀರು ಇಡಲಾಗಿದೆ. ಜನ ಕುಟೀರಗಳಿಗೆ ಬಂದು ನೀರು ಸೇವಿಸಿ ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ‘ಅಮೃತ ನೆರಳು’ ಸಾರ್ವಜನಿಕರಿಗೆ ಅನುಕೂಲವಾಗಿರುವ ಕಾರಣ ಮತ್ತೆ ಹೆಚ್ಚುವರಿಯಾಗಿ ಆರು ಅಮೃತ ನೆರಳು ಕುಟೀರ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳುತ್ತಾರೆ ಮಹಾನಗರ ಪಾಲಿಕೆ ಆಯುಕ್ತ ಜುಬಿನ್‌ ಮೊಹಾಪಾತ್ರ.

‘ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿ ವಾಲ್ಮೀಕಿ ವೃತ್ತದ ಬಳಿ ನಿರ್ಮಿಸಲಾದ ಅಮೃತ ನೆರಳು ಕುಟೀರದಲ್ಲಿ ನಿತ್ಯ 20 ಲೀಟರ್‌ನ 15 ಕ್ಯಾನ್‌ಗಳು ಖಾಲಿಯಾಗುತ್ತಿವೆ. ಬಿಸಿಲಲ್ಲಿ ಬಾಯಾರಿ ಬರುವ ಜನರಿಗೆ ಅನುಕೂಲವಾಗಿದ್ದು, ಮಹಾನಗರಪಾಲಿಕೆ ಅಧಿಕಾರಿಗಳು ನಗರದಲ್ಲಿ ಇದೊಂದು ಒಳ್ಳೆಯ ಕಾರ್ಯ ಮಾಡಿದ್ದಾರೆ’ ಎಂದು ಕುಟೀರ್‌ದಲ್ಲಿ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡ ಆಂಜನೇಯ ಹೇಳಿದರು

ಸಂಚಾರ ಒತ್ತಡ ಹೆಚ್ಚಿರುವ ಪ್ರಮುಖ ವೃತ್ತಗಳಲ್ಲಿ ವಾಹನ ಸವಾರರಿಗೆ ಅನುಕೂಲವಾಗುವಂತೆ ನೆರಳಿನ ವ್ಯವಸ್ಥೆ ಮಾಡುವಂತೆ ಜನ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಈ ಬಾರಿ ನೆರಳಿನ ವ್ಯವಸ್ಥೆ ಮಾಡಿಲ್ಲ.

ಭಾರಿ ವಾಹನಗಳು, ಭತ್ತ ಹಾಗೂ ಹತ್ತಿ ಸಾಗಣೆ ವಾಹನಗಳಿಗೆ ಸಾಗಲು ಸಮಸ್ಯೆಯಾಗಿರುವ ಕಾರಣ ಈ ಬಾರಿಗೆ ಟ್ರಾಫಿಕ್‌ನಲ್ಲಿ ನೆರಳಿನ ವ್ಯವಸ್ಥೆ ಮಾಡಿಲ್ಲ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ರಾಯಚೂರಿನ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ಬಿಸಿಲಿನ ಝಳ ತಾಳಲಾಗದೆ ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಸಾಗಿದರು
ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿ ವಾಲ್ಮೀಕಿ ವೃತ್ತದ ಬಳಿ ನಿರ್ಮಿಸಲಾದ ಅಮೃತ ನೆರಳು ಕುಟೀರದಲ್ಲಿ ತಣ್ಣನೆ ನೀರು ಕುಡಿದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.