ADVERTISEMENT

ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ: ಶಾಂತಿ ಕದಡದಿರಿ ಎಂದ ಮಂತ್ರಾಲಯ ಶ್ರೀ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 11:26 IST
Last Updated 23 ಫೆಬ್ರುವರಿ 2021, 11:26 IST
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ   

ರಾಯಚೂರು: ‘ಈಚೆಗೆ ಬಿಡುಗಡೆಯಾದ ‘ಪೊಗರು’ ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನಕಾರಿ ದೃಶ್ಯ ಚಿತ್ರೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಮುದಾಯದವರು ಆವೇಶಕ್ಕೆ ಒಳಗಾಗಿ ಶಾಂತಿ ಕದಡುವ ಕಾರ್ಯದಲ್ಲಿ ಪ್ರವೃತ್ತರಾಗಬಾದು’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಸೂಚಿಸಿದ್ದಾರೆ.

‘ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರನ್ನು ನಾವು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕ್ಷಮೆ ಯಾಚಿಸಿದ್ದಾರೆ. ಆಕ್ಷೇಪಾರ್ಹ ಭಾಗವನ್ನು ರದ್ದು ಪಡಿಸುವುದಾಗಿ ಭರವಸೆಯನ್ನು ನೀಡಿರುತ್ತಾರೆ’ ಎಂದು ತಿಳಿಸಿದ್ದಾರೆ.

‘ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನಕಾರಿ ದೃಶ್ಯಗಳು ಚಿತ್ರೀಕರಿಸಿ ಬಿಡುಗಡೆಗೊಳಿಸಿದ್ದು, ಅಕ್ಷರಶಃ ಖಂಡನೀಯ. ಚಲನಚಿತ್ರ ಮತ್ತು ಕಿರುತೆರೆಯ ಮೂಲಕ ಯಾವುದೇ ಒಂದು ಸಮುದಾಯದ ಅವಹೇಳನವಾಗಲಿ, ನಿಂದನೆಯಾಗಲಿ ಮಾಡುವುದು ಸರಿಯಲ್ಲ. ಆ ತರಹ ಚಿತ್ರೀಕರಿಸುವುದು ಚಲನಚಿತ್ರ ವಾಣಿಜ್ಯಮಂಡಳಿಯ ನೀತಿಯೂ ಅಲ್ಲ. ಅಂಥದ್ದರಲ್ಲಿ ಈ ತರಹದ ಭಾಗಗಳು ಇನ್ನುಮುಂದೆ ಬರದಂತೆ ಎಚ್ಚರಿಕೆ ವಹಿಸಲು ಸೆನ್ಸಾರ್ ಮಂಡಳಿಗೂ ನಾವು ಸೂಚಿಸಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.