ADVERTISEMENT

ರಾಯಚೂರು ಗಡಿಭಾಗದಲ್ಲಿ ಹೆಚ್ಚಿದ ನಿಗಾ

ತರಕಾರಿ ಮಾರಾಟ, ಕಿರಾಣಿ ಸಂತೆ ಕಾಲಾವಧಿ ಕಡಿಮೆ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 12:56 IST
Last Updated 10 ಏಪ್ರಿಲ್ 2020, 12:56 IST
ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಸಿಂಗನೋಡಿ ಗ್ರಾಮದ ಅಂತರರಾಜ್ಯ ಚೆಕ್‌ಪೋಸ್ಟ್‌ಗೆ ಶುಕ್ರವಾರ ಭೇಟಿನೀಡಿ ಪರಿಶೀಲಿಸಿದರು
ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಸಿಂಗನೋಡಿ ಗ್ರಾಮದ ಅಂತರರಾಜ್ಯ ಚೆಕ್‌ಪೋಸ್ಟ್‌ಗೆ ಶುಕ್ರವಾರ ಭೇಟಿನೀಡಿ ಪರಿಶೀಲಿಸಿದರು   

ರಾಯಚೂರು: ಜಿಲ್ಲೆಯಲ್ಲಿ ವಿವಿಧ ಕಾರಣಕ್ಕಾಗಿ ಸಂಚರಿಸುತ್ತಿದ್ದ ಜನರನ್ನು ಮತ್ತು ಖಾಸಗಿ ವಾಹನಗಳ ಸಂಚಾರವನ್ನು ನಿಯಂತ್ರಿಸಿದ್ದು, ಲಾಕ್‌ಡೌನ್‌ ಮುಕ್ತಾಯದ ದಿನ ಹತ್ತಿರವಾದಂತೆ ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಗಡಿಭಾಗಗಳಲ್ಲಿ ನಿಗಾ ಹೆಚ್ಚಿಸಲಾಗಿದೆ.

ರಾಯಚೂರಿಗೆ ನೇರ ಆಸ್ಪತ್ರೆಗೆ ಬರುವವರನ್ನು ಹೊರತುಪಡಿಸಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಯಾವುದೇ ವ್ಯಕ್ತಿಯು ಕರ್ನಾಟಕದತ್ತ ಬರಲು ಪೊಲೀಸರು ಬಿಡುತ್ತಿಲ್ಲ. ಸಿಂಗನೋಡಿ, ಶಕ್ತಿನಗರ, ತುಂಗಭದ್ರಾ ಸೇರಿ ವಿವಿಧೆಡೆ ಅಂತರರಾಜ್ಯ ಸಂಪರ್ಕಿಸುವ ಮುಖ್ಯರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳಿದ್ದು, ವಾಹನಗಳ ಸಂಚರಿಸಲು ಬಿಡುತ್ತಿಲ್ಲ.

ಗಡಿ ಗ್ರಾಮಗಳ ನಡುವಿನ ಕಚ್ಚಾರಸ್ತೆ ಮಾರ್ಗಗಳು ಮತ್ತು ಜಮೀನು ಮಾರ್ಗಗಳಲ್ಲಿ ಬೈಕ್‌ ಹಾಗೂ ಇತರೆ ಲಘು ವಾಹನಗಳು ಇದುವರೆಗೂ ಸಂಚರಿಸುತ್ತಿದ್ದವು. ಇದೀಗ ಗಡಿಗ್ರಾಮಗಳಿಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಕರ್ನಾಟಕದ ಗಡಿಯೊಳಗೆ ಚಾಚಿಕೊಂಡ ಜಮೀನುಗಳಿಗೆ ಕಾಲ್ನಡಿಗೆ ಮೂಲಕ ರೈತರ ಬಂದು ಹೋಗುತ್ತಿರುವುದು ಸಿಂಗನೋಡಿ–ನಂದಿನಿ ಗ್ರಾಮಗಳಲ್ಲಿ ಕಂಡುಬಂತು.

ADVERTISEMENT

ಕಟ್ಟೆಚ್ಚರ ಏಕೆ: ಜಿಲ್ಲೆಯಲ್ಲಿ ಕೊರೊನಾ ಪಾಜಿಟಿವ್‌ ಪ್ರಕರಣಗಳಿಲ್ಲ. ಆದರೆ, ತೆಲಂಗಾಣದ ಗದ್ವಾಲ್‌ ತಾಲ್ಲೂಕು, ಮಕ್ತಲ್‌ ತಾಲ್ಲೂಕುಗಳಲ್ಲಿ ಹಾಗೂ ಆಂಧ್ರಪ್ರದೇಶ ಕರ್ನೂಲ್‌ ಜಿಲ್ಲೆಯಲ್ಲಿ ಕೊರೊನಾ ಪಾಜಿಟಿವ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ.

ನೆರೆಯ ಬಳ್ಳಾರಿ, ಕಲಬುರ್ಗಿಯಲ್ಲೂ ಪಾಜಿಟಿವ್‌ ಪ್ರಕರಣಗಳು ಕಂಡುಬರುತ್ತಿರುವುದರಿಂದ ಆ ಜಿಲ್ಲೆಗಳಿಂದ ರಾಯಚೂರಿನತ್ತ ಸೋಂಕು ಹರಡುವುದನ್ನು ತಡೆಗಟ್ಟುವುದು ಸದ್ಯದ ಸವಾಲು. ಇದಕ್ಕಾಗಿ ಜಿಲ್ಲಾಡಳಿತವು ಪೊಲೀಸರು ಹಾಗೂ ವಿವಿಧ ಇಲಾಖೆಗಳ ನೆರವಿನೊಂದಿಗೆ ಕಟ್ಟೆಚ್ಚರ ಕ್ರಮಗಳನ್ನು ಜಾರಿಮಾಡಿದೆ.

ಲಾಕ್‌ಡೌನ್‌ ಇದ್ದರೂ ಅಗತ್ಯ ಆಹಾರ ಧಾನ್ಯಗಳ ಖರೀದಿಗೆ ದಿನಪೂರ್ತಿ ಜನಸಂಚಾರಕ್ಕೆ ಇದುವರೆಗೂ ಬಿಡಲಾಗುತ್ತಿತ್ತು. ಇದರಿಂದ ಬ್ಯಾಂಕ್‌ ಶಾಖೆಗಳ ಎದುರು, ಪಡಿತರ ಅಂಗಡಿಗಳ ಎದುರು ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ನೆಪಮಾತ್ರಕ್ಕೆ ಎನ್ನುವಂತಿತ್ತು. ಮತ್ತೆ ಎಲ್ಲವನ್ನು ನಿಯಂತ್ರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.