ADVERTISEMENT

ಪ್ರತಾಪಗೌಡ ಪಾಟೀಲರಿಂದ ಗೂಂಡಾಗಿರಿ: ಶಾಸಕ ಬಸನಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2021, 15:02 IST
Last Updated 4 ಮೇ 2021, 15:02 IST

ಮಸ್ಕಿ: ಸೋಲಿನಿಂದ ಹತಾಶೆಗೊಂಡ ಪ್ರತಾಪಗೌಡ ಪಾಟೀಲ ಅವರು ತಮ್ಮ ಮಕ್ಕಳ ಹಾಗೂ ಬಿಜೆಪಿ ಕಾರ್ಯಕರ್ತರ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿ ಅವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ ಎಂದು ಶಾಸಕ ಆರ್. ಬಸನಗೌಡ ಆರೋಪಿಸಿದರು.

ಮಂಗಳವಾರ ಪಟ್ಟಣದಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಅವರು, ’ಸರಳ ಸಜ್ಜನಿಕೆ ರಾಜಕಾರಣಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಪ್ರತಾಪಗೌಡ ಪಾಟೀಲ ಅವರ ಮತ್ತೊಂದು ಮುಖವಾಡ ಉಪ ಚುನಾವಣೆ ಫಲಿತಾಂಶ ನಂತರ ಬಯಲಾಗಿದೆ‘ ಎಂದರು.

ಫಲಿತಾಂಶ ಬಂದ ನಂತರ ಹಳ್ಳಿ ಹಳ್ಳಿ ತಿರುಗಿ ತಮ್ಮ ಬೆಂಬಲಿಗರ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿ ತಾವೇ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಸೋಮವಾರ ಮಸ್ಕಿ ಪಟ್ಟಣದಲ್ಲಿ ಪ್ರತಾಪಗೌಡ ಪಾಟೀಲ ಅವರ ಪುತ್ರರು ಹಾಗೂ ಕುಟುಂಬದ ಸದಸ್ಯರು ಪೊಲೀಸ್ ಅಧಿಕಾರಿಗಳ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಅಂಗಡಿ ಮನೆಗಳಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಆದರೂ ಸರ್ಕಲ್ ಇನ್‌ಸ್ಪೆಕ್ಟರ್ ದೀಪಕ್ ಬೂಸರೆಡ್ಡಿ ಹಾಗೂ ಸಬ್ ಇನ್‌ಸ್ಪೆಕ್ಟರ್ ಸಿದ್ದರಾಮ ಅವರು ರಕ್ಷಣೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

ಪೊಲೀಸ್ ಇಲಾಖೆಯು ಬಿಜೆಪಿ ಹಾಗೂ ಮಾಜಿ ಶಾಸಕರ ಪ್ರತಾಪಗೌಡ ಪಾಟೀಲ ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು. ಹಲ್ಲೆಗೊಳಗಾದ ಕಾರ್ಯಕರ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು ಸಹ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸದೆ ರಕ್ಷಣೆ ನೀಡುತ್ತಿದ್ದಾರೆ ಎಂದು ದೂರಿದರು.

ಪೊಲೀಸ್ ಅಧಿಕಾರಿಗಳು ಜನ ಸಾಮಾನ್ಯರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.