
ರಾಯಚೂರು: ಜಿಲ್ಲೆಯಲ್ಲಿ ಚಳಿ ಕಡಿಮೆಯಾಗಿದೆ. ಮಧ್ಯಾಹ್ನ ಪ್ರಖರ ಬಿಸಿಲು ಇದ್ದರೂ ಸಂಜೆ ವೇಳೆಗೆ ವಾತಾವರಣ ಸಹಜ ಸ್ಥಿತಿಗೆ ಮರಳುತ್ತಿದೆ. ಇದರಂತೆಯೇ ಹಬ್ಬದ ಸಂದರ್ಭದಲ್ಲಿ ಏರಿದ್ದ ತರಕಾರಿ ಬೆಲೆ ಸಹಜವಾಗಿ ಇಳಿದಿದೆ.
ಈರುಳ್ಳಿ, ಆಲೂಗಡ್ಡೆ, ಟೊಮೆಟೊ, ಹಿರೇಕಾಯಿ ಬೆಲೆ ಸ್ಥಿರವಾಗಿದೆ. ಸಂಕ್ರಮಣದ ವೇಳೆ ಹೆಚ್ಚಾಗಿದ್ದ ಬೆಳ್ಳುಳ್ಳಿ, ಬೀನ್ಸ್, ಹೂಕೋಸು, ಗಜ್ಜರಿ, ತುಪ್ಪದ ಹಿರೇಕಾಯಿ, ಸೌತೆಕಾಯಿ, ಮೆಣಸಿನಕಾಯಿ, ಎಲೆಕೋಸು, ತೊಂಡೆಕಾಯಿ, ಡೊಣ್ಣಮೆಣಸಿನಕಾಯಿ, ಚವಳೆಕಾಯಿ, ಬದನೆಕಾಯಿ, ಬೆಂಡೆಕಾಯಿ, ಬೀಟ್‌ರೂಟ್ ಬೆಲೆ ಇಳಿದಿದೆ.
ಪ್ರತಿ ಕ್ವಿಂಟಲ್‌ಗೆ ಬೆಳ್ಳುಳ್ಳಿ ಬೆಲೆ ₹ 6 ಸಾವಿರ, ಬೀನ್ಸ್ ₹ 4 ಸಾವಿರ, ಹೂಕೋಸು, ಗಜ್ಜರಿ, ತುಪ್ಪದ ಹಿರೇಕಾಯಿ, ಸೌತೆಕಾಯಿ ₹ 3 ಸಾವಿರ, ಮೆಣಸಿನಕಾಯಿ, ಎಲೆಕೋಸು, ತೊಂಡೆಕಾಯಿ, ಡೊಣಮೆಣಸಿನಕಾಯಿ, ಚವಳೆಕಾಯಿ ₹ 2ಸಾವಿರ, ಬದನೆಕಾಯಿ, ಬೆಂಡೆಕಾಯಿ, ಬೀಟ್‌ರೂಟ್ ₹ 1 ಸಾವಿರ ಕಡಿಮೆಯಾಗಿದೆ.
ಸೊಪ್ಪಿನ ಬೆಲೆ ಸ್ಥಿರವಾಗಿದೆ. ಸಬ್ಬಸಗಿ, ಮೆಂತೆ, ಕೊತಂಬರಿ, ಪಾಲಕ ₹ 5ಗೆ ಒಂದು ಸಿವುಡು ಮಾರಾಟವಾಗುತ್ತಿದೆ. ಹಬ್ಬ ಮುಗಿದ ಮೇಲೆ ಸೊಪ್ಪಿನ ಬೇಡಿಕೆ ಕಡಿಮೆಯಾಗಿದೆ.
ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ, ಸಬ್ಬಸಗಿ ಸೊಪ್ಪು ಬಂದಿದೆ. ಆಂಧ್ರಪ್ರದೇಶದ, ತೆಲಂಗಾಣ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಅಲ್ಪಪ್ರಮಾಣದಲ್ಲಿ ಎಲೆಕೋಸು, ಹೂಕೋಸು, ಬದನೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
‘ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ತರಕಾರಿ ಬೆಲೆ ಹೆಚ್ಚಾಗಿತ್ತು. ಆದರೆ, ಬಹುತೇಕ ಎಲ್ಲ ತರಕಾರಿ ಬೆಲೆ ಇಳಿದಿದ್ದು, ಗ್ರಾಹಕರ ಕೈಗೆಟಕುವ ದರದಲ್ಲಿ ದೊರೆಯುತ್ತಿದೆ‘ ಎಂದು ತರಕಾರಿ ವ್ಯಾಪಾರಿ ಶಶಿಕುಮಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.