ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲ್ಲೂಕು ಒಕ್ಕೂಟದಿಂದ ಶುಕ್ರವಾರ ಮಸ್ಕಿ ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ವಕೀಲ ಉದ್ಘಾಟಿಸಿದರು
ಮಸ್ಕಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಸರ್ಕಾರ ತಾರತಮ್ಯ ಮಾಡದೇ ಸರ್ಕಾರಿ ಶಾಲೆಗಳಿಗೆ ನೀಡಿದಂತೆ ಎಲ್ಲ ಸೌಕರ್ಯಗಳನ್ನು ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ವಕೀಲ ಆಗ್ರಹಿಸಿದರು.
ಪಟ್ಟಣದ ಭ್ರಮರಾಂಬದೇವಸ್ಥಾನದಲ್ಲಿ ಶುಕ್ರವಾರ ಒಕ್ಕೂಟದ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘1995ರಿಂದ ಆರಂಭವಾದ ಖಾಸಗಿ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬೇಕು. ತಾಲ್ಲೂಕುವಾರು ಇರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡುವ ಜೊತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಲು ಸರ್ಕಾರ ಮುಂದಾಗಬೇಕು’ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಎನ್., ಟಿ. ಬಸವರಾಜ, ಶಾಂತನಗೌಡ ಪಾಟೀಲ, ಶರ್ಪುದ್ದೀನ್ ಎಚ್. ಮಂಜುನಾಥ ಸ್ವಾಮಿ ತೋರಣದಿನ್ನಿ, ಪ್ರಕಾಶ ಪಾಟೀಲ, ಚಂದ್ರಶೇಖರ ಬಲ್ಲಟಗಿ, ಶಂಕರಲಿಂಗತ್ಯಲಿಂಗಯ್ಯ ಸ್ವಾಮಿ, ವೈ. ನರೇಂದ್ರನಾಥ, ರವಿಕುಮಾರ ಗೋನಾಳ, ಒಕ್ಕೂಟದ ಕಾರ್ಯದರ್ಶಿ ಕೆ.ವಿ. ರೆಡ್ಡಿ ಇತರರು ಇದ್ದರು.
ತಾಲ್ಲೂಕಿನ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 30ಕ್ಕೂ ಹೆಚ್ಚು ಶಿಕ್ಷಕರನ್ನು ಒಕ್ಕೂಟದಿಂದ ಸನ್ಮಾನಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನಗೊಂಡ ಶಿಕ್ಷರನ್ನು ಆಯಾ ಶಾಲೆಯ ವಿದ್ಯಾರ್ಥಿಗಳು ಅಭಿನಂದಿಸಿದರು. ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.
ರಾಜ್ಯದ ಶೈಕ್ಷಣಿಕ ಮಟ್ಟ ಸುಧಾರಿಸುವ ಸಲುವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹೋರಾಟ ಮಾಡುತ್ತಿದೆ ಹೊರತು ಯಾರ ವಿರುದ್ಧವೂ ಅಲ್ಲ.ಮಸ್ಕಿ ನಾಗರಾಜ, ನ್ಯಾಯವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.