ADVERTISEMENT

ರಾಯಚೂರು: 9 ದಿನದ ಗಣಪತಿ ಮೂರ್ತಿಗಳ ಅದ್ಧೂರಿ ವಿಸರ್ಜನೆ 

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:06 IST
Last Updated 5 ಸೆಪ್ಟೆಂಬರ್ 2025, 6:06 IST
ರಾಯಚೂರಿನ ಖಾಸಬಾವಿಯಲ್ಲಿ ವಿಸರ್ಜನೆಗೆ ಸಾಗಿದ ಸಾರ್ವಜನಿಕ ಗಣಪತಿ
ರಾಯಚೂರಿನ ಖಾಸಬಾವಿಯಲ್ಲಿ ವಿಸರ್ಜನೆಗೆ ಸಾಗಿದ ಸಾರ್ವಜನಿಕ ಗಣಪತಿ   

ರಾಯಚೂರು: ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಿದ್ದ 9 ದಿನಗಳ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಗುರುವಾರ ಚಾಲನೆ ದೊರೆಯಿತು.

ರಾಯಚೂರು ನಗರದಲ್ಲಿ ಪ್ರತಿಷ್ಠಾಪಿಸಿದ್ದ 9 ದಿನದ ಒಟ್ಟು 122 ಸಾರ್ವಜನಿಕ ಗಣಪತಿಗಳು ಸೇರಿ ಜಿಲ್ಲೆಯ ವಿವಿಧೆಡೆ 346 ಗಣಪತಿಗಳ ವಿಸರ್ಜನೆ ಕಾರ್ಯ ಆರಂಭವಾಯಿತು. ಪೊಲೀಸರು ಆದಷ್ಟು ಬೇಗ ವಿಸರ್ಜನಾ ಮೆರವಣಿಗೆ ಆರಂಭಿಸುವಂತೆ ಮೊದಲೇ ಸೂಚನೆ ನೀಡಿದರೂ ಭಕ್ತರು ಹಾಗೂ ಮಂಡಳಗಳ ಸದಸ್ಯರು ನಗರದಲ್ಲಿ ತಡವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿ ದೇವರ ವಸ್ತುಗಳ ಹರಾಜು ಮಾಡಿದ ನಂತರ ಮೆರವಣಿಗೆಗೆ ಬಂದರು. ಹೀಗಾಗಿ ವಿಸರ್ಜನಾ ಕಾರ್ಯವೂ ವಿಳಂಬವಾಯಿತು.

ಬೃಹತ್‌ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಗಣೇಶೋತ್ಸವ ಮಂಡಳಗಳು ಲಕ್ಷಾಂತರ ರೂಪಾಯಿ ಮುಂಗಡ ಹಣ ನೀಡಿ ನೆರೆಯ ರಾಜ್ಯಗಳಿಂದ ಡಾಲ್ಬಿಗಳನ್ನು ತರಿಸಿದ್ದರು.

ADVERTISEMENT

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು, ಯುವತಿಯರು ಹಾಗೂ ಮಕ್ಕಳು ಪ್ರಸಿದ್ಧ ಕನ್ನಡ, ಹಿಂದಿ, ತೆಲುಗು ಹಾಗೂ ಮರಾಠಿ ಚಲನಚಿತ್ರಗಳ ಕವಿಗಡಚ್ಚುವ ಹಾಡಿಗೆ ಕುಣಿದು ಕುಪ್ಪಳಿಸಿದರು. ಯುಕವರು ಗಾಳಿಯಲ್ಲಿ ಗುಲಾಲು ತೂರಿ ಡಿಜೆ ಸಂಗೀತಕ್ಕೆ ಮೈಮನ ತಣಿಯುವಂತೆ ಕುಣಿದರು.


ಬೃಹತ್ ಗಣಪತಿ ಮುಳುಗಿಸಲು ಕ್ರೇನ್ ವ್ಯವಸ್ಥೆ:

ದೊಡ್ಡ ಗಣಪತಿಗಳ ವಿಸರ್ಜನೆಗಾಗಿಯೇ ನಗರಸಭೆಯಿಂದ ಎರಡು ಕ್ರೇನ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಪಾಲಿಕೆಯ ಸಿಬ್ಬಂದಿ ದೊಡ್ಡ ಗಣೇಶನ ಮೂರ್ತಿಗಳಿಗೆ ಬೆಲ್ಟ್‌ ಕಟ್ಟಿ ಹೊಂಡದಲ್ಲಿ ನಿಧಾನವಾಗಿ ಇಳಿಬಿಟ್ಟು ಮುಳುಗಿಸಿದರು.

ಐದನೇ ಹಾಗೂ ಏಳನೇ ದಿನವೂ ಪಿಒಪಿ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಗಿತ್ತು. ಪಿಒಪಿಗಳ ಗಣಪತಿಗಳೇ ಅಧಿಕ ಪ್ರಮಾಣದಲ್ಲಿ ಇದ್ದ ಕಾರಣ ಹೊಂಡದಲ್ಲಿ ತೇಲಾಡಿದವು.


ಸಂಚಾರ ದಟ್ಟಣೆ:

ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಗಣಪತಿಗಳು ಟ್ರ್ಯಾಕ್ಟರ್‌ಗನಲ್ಲಿ ಸರತಿ ಸಾಲಿನಲ್ಲಿ ಬರುತ್ತಿದ್ದರಿಂದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು. ಬೃಹತ್ ಗಾತ್ರದ ಏಕದಂತನ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಸಾಗಿಸುತ್ತಿದ್ದ ಕಾರಣ ಪ್ರಮುಖ ಬೀದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಮಾವಿನಕೆರೆ ರಸ್ತೆಯಲ್ಲಿ ಬ್ಯಾರಿಕೇಡ್‌ ಅಳವಡಿಸಿ ಎದುರಿನಿಂದ ವಾಹನಗಳು ಬರದಂತೆ ತಡೆಯಲಾಗಿತ್ತು. ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

ಎರಡು ದಿನಗಳ ಹಿಂದೆ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಡಗಳು ಹೊಡೆದಾಡಿ ಕೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆ ಪ್ರದೇಶ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಮಾವಿನಕೆರೆ ಸಮೀಪ ಕೆಎಸ್‌ಆರ್‌ಪಿ ಹಾಗೂ ಡಿಎಆರ್ ಸಿಬ್ಬಂದಿಯನ್ನು ನಿಯೋಜಿಸಿತ್ತು.


468 ಸಾರ್ವಜನಿಕ ಗಣಪತಿಗಳು:

ರಾಯಚೂರು ನಗರದ ಸದರ್‌ ಬಜಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 32, ಪಶ್ವಿಮ ಠಾಣೆಯ ವ್ಯಾಪ್ತಿಯಲ್ಲಿ 19 ನೇತಾಜಿ ‍ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ34, ಮಾರ್ಕೆಟ್‌ ಯಾರ್ಡ್‌ ಠಾಣೆ ವ್ಯಾಪ್ತಿಯಲ್ಲಿ 16 ಹಾಗೂ ರಾಯಚೂರು ಗ್ರಾಮೀಣ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ 21 ಸಾರ್ವಜನಿಕ ಗಣಪತಿಗಳು ಒಂಬತ್ತನೆಯ ದಿನಕ್ಕೆ ವಿಸರ್ಜನೆಯಾಗುತ್ತಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು.

‘ಹಿಂದಿನ ಐದು ವರ್ಷಗಳ ಇತಿಹಾಸವನ್ನು ಅವಲೋಕಿಸಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಗಣಪತಿಗಳು ಎಂದು ವರ್ಗೀಕರಣ ಮಾಡಿ ಅಲ್ಲಿ ಬಂದೋ ಬಸ್ತ್‌ ಹೆಚ್ಚಿಸಲಾಗಿದೆ. ಡಿಎಆರ್‌ನ 4, ಕೆಎಸ್‌ಆರ್‌ಪಿಯ 1 ತುಕತಿಯನ್ನು ನಿಯೋಜಿಸಲಾಗಿದೆ. ಒಬ್ಬರು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ನಾಲ್ವರು ಡಿವೈಎಸ್‌ಪಿ, 10 ಇನ್‌ಸ್ಪೆಪ್ಟರ್, 700 ಕಾನ್‌ಸ್ಟೆಬಲ್‌ ಹಾಗೂ 200 ಗೃಹರಕ್ಷಕ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ’ ಎಂದು ಹೇಳಿದರು.

ಸಾರ್ಜಜನಿಕರು ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು. ಅಹಿತಕರ ಘಟನೆಯ ಮುನ್ಸೂಚನೆ ದೊರೆತರೆ ಪೊಲೀಸರಿಗೆ ತಿಳಿಸಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.
ಪುಟ್ಟಮಾದಯ್ಯ ಎಂ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.