ADVERTISEMENT

ರಾಯಚೂರು ಕೃಷಿ ಮೇಳ: ಬೆರಗುಗೊಳಿಸಿದ 40Kgಯ ಕುಂಬಳಕಾಯಿ, ₹ 9 ಲಕ್ಷದ ಗಿರ್ ಎತ್ತು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 7:17 IST
Last Updated 8 ಡಿಸೆಂಬರ್ 2024, 7:17 IST
   

ರಾಯಚೂರು: ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ಪ್ರದರ್ಶಿಸಲಾದ 40 ಕೆ.ಜಿ ತೂಕದ ಕುಂಬಳಕಾಯಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದೆ.

40 ಕೆ.ಜಿ ತೂಕದ ಕುಂಬಳಕಾಯಿಯನ್ನು ಒಬ್ಬರಿಂದ ಎತ್ತಲು ಸಾಧ್ಯವಾಗುತ್ತಿಲ್ಲ. ನಾಲ್ವರು ಎತ್ತಿಕೊಂಡು ಬಂದು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಶಿವಮೊಗ್ಗದಲ್ಲಿ ಇಂತಹ ಕುಂಬಳಕಾಯಿ ಬೆಳೆಯಲಾಗುತ್ತಿದ್ದು, ರೈತರು ವಿಶ್ವವಿದ್ಯಾಲಯದ ಸಿಬ್ಬಂದಿಯಿಂದ ಆಸಕ್ತಿಯಿಂದ ಮಾಹಿತಿ ಕೇಳಿ ಪಡೆಯುತ್ತಿದ್ದಾರೆ. 16 ಕೆಜಿ ತೂಕದ ಸುರ್ವಣಗಡ್ಡೆಯನ್ನೂ ರೈತರು ಬೆರಗುಗಣ್ಣಿನಿಂದ ವೀಕ್ಷಿಸುತ್ತಿದ್ದಾರೆ.

‘ಬೃಹತ್‌ ಕುಂಬಳಕಾಯಿ ಹಾಗೂ ಸುವರ್ಣಗಡ್ಡೆ ನಮ್ಮ ವಿಶ್ವವಿದ್ಯಾಲಯದ ಆಕರ್ಷಣೆಯಾಗಿದೆ. ರೈತರು ನಮ್ಮ ಮಳಿಗೆಗಳಿಗೆ ಬಂದು ಮಾಹಿತಿ ಸಂಗ್ರಹಿಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಎಲ್ಲ ಬಗೆಯ ಮಾಹಿತಿ ಪೂರೈಸಲಾಗಿದೆ‘ ಎಂದು ಡಾ.ಪ್ರಶಾಂತ ಹೇಳಿದರು.

ADVERTISEMENT

₹ 9 ಲಕ್ಷ ಮೌಲ್ಯದ ಗುಜರಾತಿನ ಗಿರ್‌ ತಳಿಯ ಎತ್ತು

ಕೃಷಿ ಮೇಳದಲ್ಲಿ ₹ 9 ಲಕ್ಷ ಮೌಲ್ಯದ ಗುಜರಾತಿನ ಗಿರ್‌ ತಳಿಯ ಏಳು ವರ್ಷದ ಎತ್ತು ಹಾಗೂ ₹ 6 ಲಕ್ಷ ಮೌಲ್ಯದ ಮುರ್ರಾ ತಳಿಯ 6 ವರ್ಷದ ಕೋಣದ ಬೆಲೆ ಕೇಳಿ ಜನ ಹೌಹಾರುತ್ತಿದ್ದಾರೆ.

ಬೃಹದಾಕಾರದ ಈ ಜಾನುವಾರುಗಳನ್ನು ಜನ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಇವುಗಳ ಬೆಲೆ ಕೇಳಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ.

ಸಿರಗುಪ್ಪ ತಾಲ್ಲೂಕಿನ ಪ್ರಗತಿಪರ ರೈತ ಶ್ರೀನಿವಾಸರಾಜು ತಮ್ಮ 75 ಎಕರೆ ಜಮೀನಿನಲ್ಲಿ ಕೃಷಿಯ ಜತೆಗೆ ಜಾನುವಾರು ಸಾಕಣೆ ಮಾಡುತ್ತಿದ್ದಾರೆ. ಅಪರೂಪದ ತಳಿಗಳನ್ನು ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಎತ್ತು ವಯಸ್ಸಿನಲ್ಲಿ ಚಿಕ್ಕದಾಗಿದ್ದರೂ ಆಗಲೇ ಒಂದು ಟನ್‌ ಭಾರ ಹೊಂದಿದೆ.

‘ನಮ್ಮಲ್ಲಿ 300 ಆಕಳು ಸಾಕಿದ್ದೇವೆ. ಜಾನುವಾರುಗಳು ಇರುವ ಕಾರಣ ಕೃಷಿ ಸಮೃದ್ಧವಾಗಿವೆ. ಬೆಲೆಬಾಳುವ ಜಾನುವಾರುಗಳನ್ನೂ ಸಾಕಿದ್ದೇವೆ. ರೈತರಿಗೆ ಹೊಸ ತಳಿಯ ಎತ್ತು, ಕೋಣ ಪರಿಚಯಿಸಲು ಬಂದಿದ್ದೇವೆ‘ ಎಂದು ರೈತ ಶ್ರೀನಿವಾಸರಾಜು ತಿಳಿಸಿದರು.

ಮುರ್ರಾ ತಳಿಯ 6 ವರ್ಷದ ಕೋಣ

ಕಪ್ಪು ಮಾಂಸದ ಕಡಕನಾಥ ಕೋಳಿ

ಬೀದರ್‌ನ ಪಶು, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ದೇಶದ ಮೂರು ಪ್ರಮುಖ ಕೋಳಿಗಳನ್ನು ಪ್ರದರ್ಶಿಸಲಾಗಿದೆ. ಕೋಳಿಗಳ ಪ್ರತಿಕೃತಿ ಇದ್ದರೂ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ಕಪ್ಪು ಮಾಂಸದ ಮಧ್ಯಪ್ರದೇಶದ ಕಡಕನಾಥ ತಳಿಯ ಕೋಳಿ, ಗಿನಿಫೋನ್, ದೇಸಿ ಕೋಳಿ ಹಾಗೂ ಬಾತುಕೋಳಿ ಪ್ರದರ್ಶನ ಮಳಿಗೆಯ ಮೆರುಗು ಹೆಚ್ಚಿಸಿವೆ.

‘ಸದೃಢವಾಗಿರುವ ಕಡಕನಾಥ ಕೋಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಔಷಧೀಯ ಗುಣ ಹೊಂದಿದೆ ಎನ್ನುವ ನಂಬಿಕೆಯಿಂದ ಅನೇಕ ಜನ ಇದರ ಮಾಂಸ ಸೇವಿಸುತ್ತಾರೆ. ಇದರ ಮಾಂಸ ಹಾಗೂ ರಕ್ತ ಎರಡೂ ಕಪ್ಪದಾಗಿರುತ್ತದೆ. ಮೊಟ್ಟೆ ಬೆಲೆ ಒಂದಕ್ಕೆ ₹ 20 ಇದೆ. ಬೀದರ್‌ ತಾಲ್ಲೂಕಿನ ಚಿಟ್ಟಾದಲ್ಲಿ ರೈತರೊಬ್ಬರು ಕಡಕನಾಥ ಕೋಳಿ ಸಾಕಾಣಿಕೆ ಮಾಡಿದ್ದು, ಕೋಳಿ ಮರಿಗಳನ್ನು ಮಾರಾಟವನ್ನೂ ಮಾಡುತ್ತಿದ್ದಾರೆ‘ ಎಂದು ಡಾ.ವಿದ್ಯಾಸಾಗರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.