ADVERTISEMENT

ರಾಯಚೂರು: ಚಿತ್ರಕಲಾ ಶಿಬಿರದಲ್ಲಿ ಆಕರ್ಷಕ ಕಲಾಕೃತಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 14:24 IST
Last Updated 6 ಫೆಬ್ರುವರಿ 2026, 14:24 IST
<div class="paragraphs"><p>ಚಿತ್ರಕಲಾ ಶಿಬಿರ</p></div>

ಚಿತ್ರಕಲಾ ಶಿಬಿರ

   

ಚಿತ್ರಕಲಾ ಶಿಬಿರ

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಚಿತ್ರಕಲಾ ಶಿಬಿರ ಹಾಗೂ ಕಲಾಕೃತಿಗಳ ಪ್ರದರ್ಶನ ಕಲಾಸಕ್ತರ ಗಮನ ಸೆಳೆಯುತ್ತಿವೆ.

ADVERTISEMENT

ಉತ್ಸವದ ಕೃಷಿ ಮೇಳ, ಆಹಾರ ಮೇಳ ಹಾಗೂ ಮುಖ್ಯ ವೇದಿಕೆಗಳಿಗೆ ತೆರಳುವ ಮಾರ್ಗದ ಆರಂಭದಲ್ಲಿಯೇ ಈ ಚಿತ್ರಕಲಾ ಶಿಬಿರದ ಮಳಿಗೆಗಳು ಇರುವ ಕಾರಣ ಹೆಚ್ಚಿನ ಸಂಖ್ಯೆಯ ಜನರು ಕಲಾಕೃತಿಗಳ ವೀಕ್ಷಣೆಗೆ ತೆರಳುವುದು ಸಾಮಾನ್ಯವಾಗಿದೆ. ಶಾಲಾ ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಲಾಕೃತಿಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿರುವುದು ಶುಕ್ರವಾರ ಶಿಬಿರದಲ್ಲಿ ಕಂಡು ಬಂದಿತು.

ಈ ಚಿತ್ರಕಲಾ ಶಿಬಿರ ಹಾಗೂ ಪ್ರದರ್ಶನದ11ಮಳಿಗೆಗಳಲ್ಲಿ ವಿವಿಧ ಚಿತ್ರ ಕಲಾವಿದರು ಹಾಗೂ ಸಂಸ್ಥೆಗಳ ವತಿಯಿಂದ ಜಲವರ್ಣ, ತೈಲ ವರ್ಣ, ಅಕ್ರಲಿಕ್, ಪೋಸ್ಟರ್ ವರ್ಣ, ಪೆನ್ಸಿಲ್, ಇಂಕ್ ಮಾಧ್ಯಮಗಳಲ್ಲಿ ರಚಿಸಿದ 300ಕ್ಕೂ ಅಧಿಕ

ಆಕರ್ಷಕ ಕಲಾಕೃತಿಗಳ ಪ್ರದರ್ಶನದ ಜೊತೆಗೆ ಮಾರಾಟಕ್ಕಿಡಲಾಗಿದೆ.

ಈ ಚಿತ್ರಕಲಾ ಶಿಬಿರಕ್ಕೆ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ 25 ಚಿತ್ರ ಕಲಾವಿದರನ್ನು

ಆಹ್ವಾನಿಸಿ ಸ್ಥಳದಲ್ಲೇ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ಹಾಗೂ ಮಹತ್ವದ ಸ್ಥಳಗಳ ಚಿತ್ರ ಬರೆಯುವ ಜವಾಬ್ದಾರಿ ನೀಡಲಾಗಿದೆ. ಶುಕ್ರವಾರ ಆಹ್ವಾನಿತ ಕಲಾವಿದರು ಶಿಬಿರದಲ್ಲಿ ರಾಯಚೂರು ನಗರದ ಕಲ್ಲಾನೆ, ಶಕ್ತಿನಗರದಲ್ಲಿರುವ ಥರ್ಮಲ್ ವಿದ್ಯುತ್ ಸ್ಥಾವರ ಘಟಕ, ಮುದಗಲ್ ಕೋಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಪುರಾತನ ಸ್ಮಾರಕಗಳ ಚಿತ್ರಗಳನ್ನು ಬರೆಯುತ್ತಿರುವುದು ಕಂಡು ಬಂದಿತು.

' ಶಿಬಿರದಲ್ಲಿ ಆಹ್ವಾನಿತ ಕಲಾವಿದರು ರಚಿಸಿರುವ ಜಿಲ್ಲೆಗೆ ಸಂಬಂಧಿಸಿದ ಐತಿಹಾಸಿಕ ಸ್ಮಾರಕಗಳು ಹಾಗೂ ಮಹತ್ವದ ಸ್ಥಳಗಳ ‌ಕಲಾಕೃತಿಗಳನ್ನು ಶನಿವಾರ ಸಾರ್ವಜನಿಕವಾಗಿ ಪ್ರದರ್ಶನಕ್ಕಿಡಲಾಗುವುದು. ಶಿಬಿರ ಮುಕ್ತಾಯವಾದ ನಂತರ ಈ ಎಲ್ಲಾ ಕಲಾಕೃತಿಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗುವುದು. ರಾಯಚೂರು ನಗರದ ನೂತನ ಜಿಲ್ಲಾಡಳಿತ ಭವನ ( ಜಿಲ್ಲಾಧಿಕಾರಿ ಕಚೇರಿ)ದಲ್ಲಿ ಕಾಯಂ ಆಗಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಈ ಕಲಾಕೃತಿಗಳನ್ನು ಅಳವಡಿಸಲು ಅಧಿಕಾರಿಗಳು ‌ನಿರ್ಧರಿಸಿದ್ದಾರೆ' ಎಂದು ಹಿರಿಯ ಕಲಾವಿದರಾದ ಎಚ್.ಎಚ್. ಮ್ಯಾದರ್ ಹಾಗೂ ಪಿ.ಚಂದ್ರಶೇಖರ ತಿಳಿಸಿದರು.

' ಜಿಲ್ಲಾಡಳಿತ ಜಿಲ್ಲಾ ಉತ್ಸವದ ಪ್ರಯುಕ್ತ ನಮಗೆ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಚಿತ್ರ ರಚನೆಗೆ ಅತ್ಯುತ್ತಮ ಅವಕಾಶ ಕಲ್ಪಿಸಿದೆ' ಎಂದು ಈ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ್ದ ಮಾನ್ವಿ ಪಟ್ಟಣದ ‌ಕಲಾವಿದ ರವಿ ನಾಯಕ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.