
ರಾಯಚೂರು: ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಯಚೂರು ಮಹಾನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಇ–ಖಾತಾ, ರಸ್ತೆ ತಗ್ಗುಗುಂಡಿಗಳು ಹಾಗೂ ಘನತ್ಯಾಜ್ಯ ವಿಲೇವಾರಿ ವಿಷಯಗಳು ಭಾರಿ ಸದ್ದು ಮಾಡಿದವು.
ಮೇಯರ್ ನರಸಮ್ಮ ಮಾಡಗಿರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಹಾಗೂ ಬಿಜೆಪಿ ಶಾಸಕರ ಮಧ್ಯೆ ರಸ್ತೆ ಮಧ್ಯದ ಗುಂಡಿಗಳನ್ನು ಮುಚ್ಚುವ ವಿಷಯವಾಗಿಯೇ ವಾಗ್ವಾದ ನಡೆಯಿತು.
ಕಾಂಗ್ರೆಸ್ ಸದಸ್ಯ ಜಯಣ್ಣ ಹಾಗೂ ಶ್ರೀನಿವಾಸ ರೆಡ್ಡಿ ಅವರು ‘ನಗರದಲ್ಲಿನ ರಸ್ತೆಗಳು ಹಾಳಾಗಿವೆ. ರಸ್ತೆ ಗುಂಡಿ ಮುಚ್ಚಲು ನಗರ ಶಾಸಕರು ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಾಸಕ ಶಿವರಾಜ ಪಾಟೀಲ, ‘ಯಾವುದೇ ಶಾಸಕರಿಗೆ ರಸ್ತೆ ಗುಂಡಿ ಮುಚ್ಚಲು ಪ್ರತ್ಯೇಕ ಅನುದಾನ ಬರುವುದಿಲ್ಲ. ಹಾಗೆ ಅನುದಾನ ಬರುತ್ತಿದ್ದರೆ ನಾನು ರಾಜೀನಾಮೆ ಕೊಡುವೆ. ಮುಂದಿನ ಅವಧಿಗೆ ನೀವೇ ಶಾಸಕರಾಗಿರಿ’ ಎಂದರು.
‘ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹೊಸ ರಸ್ತೆ, ಕಟ್ಟಡ ನಿರ್ಮಾಣಕ್ಕೆ ಅವಕಾಶ ಇದೆ. ಆದರೆ, ಗುಂಡಿ ಮುಚ್ಚಲು ಅವಕಾಶ ಇಲ್ಲ. ಸರ್ಕಾರ ಮಹಾನಗರಪಾಲಿಕೆಗೆ ಕೊಡುವ ಅನುದಾನವನ್ನು ರಸ್ತೆ ನಡುವಿನ ಗುಂಡಿ ಮುಚ್ಚಲು ತನ್ನ ಅನುದಾನ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ವಸಂತಕುಮಾರ ಮಾತನಾಡಿ,‘ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚುವುದು ನಮ್ಮೆಲ್ಲರ ಹೊಣೆಯಾಗಿದೆ. ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸೋಣ’ ಎಂದು ಹೇಳಿದ ಈ ಚರ್ಚೆಗೆ ವಿರಾಮ ನೀಡಿದರು.
ರಾಯಚೂರು ನಗರದಲ್ಲಿರುವ ಮಹಾನಗರಪಾಲಿಕೆ ವಾಣಿಜ್ಯ ಮಳಿಗೆಗಳು ದುರ್ಬಳಕೆಯಾಗುತ್ತಿವೆ. ಅನೇಕ ವರ್ಷಗಳಿಂದ ಬಾಡಿಗೆ ಪರಿಷ್ಕರಣೆ ಮಾಡಿಲ್ಲ. ಹರಾಜಿನಲ್ಲಿ ಮಳಿಗೆ ಪಡೆದವರು ಬೇರೊಬ್ಬರಿಗೆ ಹೆಚ್ಚಿನ ಬಾಡಿಗೆಗೆ ಕೊಟ್ಟಿದ್ದಾರೆ. ಇದರಿಂದ ಪಾಲಿಕೆ ಆದಾಯ ಕಡಿಮೆಯಾಗುತ್ತಿದೆ. ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ವಸಂತಕುಮಾರ ಒತ್ತಾಯಿಸಿದರು.
ನಗರದಲ್ಲಿ ಒಟ್ಟು 280 ಮಳಿಗೆಗಳು ಇವೆ. 172 ಮಳಿಗೆಗಳಿಂದ ಬಾಡಿಗೆ ಬರುತ್ತಿದೆ. 110 ಮಳಿಗೆಗಳು ದುರಸ್ತಿಯಲ್ಲಿವೆ. ಕೆಲವರು ಸ್ವಂತ ಹಣ ಖರ್ಚು ಮಾಡಿಕೊಂಡು ಮಳಿಗೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
‘ಹರಾಜಿನಲ್ಲಿ ಮಳಿಗೆ ಪಡೆದು ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡ ಕೆಲವರು ವ್ಯಾಪಾರಿಗಳೊಂದಿಗೆ ಕಾನೂನು ಬಾಹಿರವಾಗಿ ಒಳ ಒಪ್ಪಂದ ಮಾಡಿ ಹೆಚ್ಚಿನ ಹಣಕ್ಕೆ ಬಾಡಿಗೆ ಕೊಟ್ಟಿದ್ದಾರೆ. ಆದ್ದರಿಂದ ಅಗತ್ಯವಿರುವವರಿಗೆ ಬಾಡಿಗೆ ಕೊಡಬೇಕು. ಹಣ ಗಳಿಕೆಗೆ ಬಾಡಿಗೆ ಪಡೆದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು‘ ಎಂದು ಶಾಸಕ ಶಿವರಾಜ ಪಾಟೀಲ ಒತ್ತಾಯಿಸಿದರು.
2025ರ ಮಾರ್ಚ್ ನಿಂದ ಏಪ್ರಿಲ್ ವರೆಗಿನ ಜಮಾ ಖರ್ಚಿನ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಸುಧೀರ್ಘ ಚರ್ಚೆಯ ನಂತರ ಸಭೆ ಒಪ್ಪಿಗೆ ಸೂಚಿಸಿತು.
ಪ್ರಸಕ್ತ ವರ್ಷ ₹ 21 ಕೋಟಿ ತೆರಿಗೆ ವಸೂಲಿ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ, ಕೇವಲ ಏಳು ತಿಂಗಳ ಅವಧಿಯಲ್ಲೇ ₹ 18 ಕೋಟಿ ಅಂದರೆ ಶೇಕಡ 84ರಷ್ಟು ತೆರಿಗೆ ವಸೂಲಿ ಮಾಡಿರುವ ಬಗ್ಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಷತ್ ಕಾರ್ಯದರ್ಶಿ ಜೈಪಾಲ ರೆಡ್ಡಿ ಸಭೆಯ ನಡಾವಳಿ ವಾಚಿಸಿದರು. ಉಪ ಮೇಯರ್ ಸಾಜೀದ್ ಸಮೀರ್, ಮಹಾನಗರಸಭೆ ಸದಸ್ಯರು, ಉಪ ಆಯುಕ್ತರಾದ ಸಂತೋಷರಾಣಿ, ಮೇನಕಾ ಪಾಟೀಲ ಉಪಸ್ಥಿತರಿದ್ದರು.
ರಾಯಚೂರು ನಗರದ ಜನ ಇ–ಖಾತಾ ಪಡೆಯಲು ಮೂರು ತಿಂಗಳಿಂದ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ಹೇಳುತ್ತಿದ್ದಾರೆ ಹೊರತು ಇ–ಖಾತಾ ಮಾಡಿಕೊಡುತ್ತಿಲ್ಲ. ಈ ಸಮಸ್ಯೆ ಬಗೆ ಹರಿಯುವುದು ಯಾವಾಗ ಎಂದು ಕಾಂಗ್ರೆಸ್ ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಪ್ರಶ್ನಿಸಿದರು. ಶಾಸಕ ಶಿವರಾಜ ಪಾಟೀಲ ಮಾತನಾಡಿ ‘ನನಗೆ ಸಂಬಂಧಿಸಿದ ಆಸ್ತಿಯ ಇ–ಖಾತಾ ಆಗುತ್ತಿಲ್ಲ. ಇನ್ನು ಜನ ಸಾಮಾನ್ಯರ ಸ್ಥಿತಿ ಏನಾಗಿರಬಹುದು. ಜನರಿಗೆ ಸರಳವಾಗಿ ಇ–ಖಾತಾ ದೊರೆಯುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು. ‘ಮೂರು ತಿಂಗಳ ಹಿಂದೆ ಕೇವಲ ನಾಲ್ವರಿಗೆ ಮಾತ್ರ ಲಾಗಿನ್ ಕೊಡಲಾಗಿತ್ತು. ಇದೀಗ 18 ಜನರಿಗೆ ಲಾಗಿನ್ ಕೊಡಲಾಗಿದೆ. ತಾಂತ್ರಿಕ ದೋಷ ಪಡಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇನ್ನೂ ಮೂರು ತಿಂಗಳಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ನಗರದಲ್ಲಿನ ಘನತ್ಯಾಜ್ಯ ವಿಲೇವಾರಿ ಬಗ್ಗೆಯೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮಹಾನಗರಪಾಲಿಕೆಯು ವಾಹನಗಳ ಸಂಖ್ಯೆ ಹೆಚ್ಚು ಮಾಡಿದರೆ ಸಾಲದು ಮನೆಗಳಿಂದ ಕಸ ಸಂಗ್ರಹಿಸುವ ಪೌರ ಕಾರ್ಮಿಕರ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ ‘700 ಜನಸಂಖ್ಯೆಗೆ ಒಬ್ಬರು ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇದೆ. ಮೊದಲ ಹಂತದಲ್ಲಿ ಕಸವಿಲೇವಾರಿ ವಾಹನಗಳನ್ನು ಖರೀದಿಸಲಾಗಿದೆ. ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಂದೋರ್ ಮಾದರಿಯಲ್ಲಿ ಕಸ ವಿಲೇವಾರಿಗೆ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.