ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳ, ನೌಕರರ ಪ್ರತಿಭಟನೆ

ಆಡಳಿತಾತ್ಮಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 6:40 IST
Last Updated 13 ಆಗಸ್ಟ್ 2025, 6:40 IST
ರಾಯಚೂರಿನ ವಾಲ್ಕಟ್‌ ಮೈದಾನದಲ್ಲಿ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ನೌಕರರು ಪ್ರತಿಭಟನೆ ನಡೆಸಿದರು
ರಾಯಚೂರಿನ ವಾಲ್ಕಟ್‌ ಮೈದಾನದಲ್ಲಿ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ನೌಕರರು ಪ್ರತಿಭಟನೆ ನಡೆಸಿದರು   

ರಾಯಚೂರು: ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಖಾಸಗಿ ಸಂಸ್ಥೆಗಳ ನೌಕರರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಾಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು, ಖಾಸಗಿ ಶಾಲೆಗಳ ಶಿಕ್ಷಕರು, ಉಪನ್ಯಾಸಕರು ನಗರದ ಮಹಾತ್ಮಗಾಂಧಿ ಪುತ್ಥಳಿ ಬಳಿ ಸಮಾವೇಶಗೊಂಡು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.

ಘೋಷಣಾ ಫಲಕಗಳನ್ನು ಹಿಡಿದು ಶಾಂತಿಯುತವಾಗಿ ಕೇಂದ್ರ ಬಸ್ ನಿಲ್ದಾಣ, ಮಹಾನಗರ ಪಾಲಿಕೆ ಕಚೇರಿ ಮಾರ್ಗ, ಟಿಪ್ಪು ಸುಲ್ತಾನ್ ರಸ್ತೆ ಮೂಲಕ ಬಸವೇಶ್ವರ ವೃತ್ತಕ್ಕೆ ಬಂದು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ವಾಲ್ಕಟ್‌ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಹಳೆಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.

ADVERTISEMENT

‘ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ವಿಧಿಸಿರುವ ಷರತ್ತಗಳುನ್ನು ಸರಳೀಕರಣಗೊಳಿಸಬೇಕು. ವಿದ್ಯಾರ್ಥಿಗಳ ಶುಲ್ಕದ ಮೇಲೆ ಹೇರಿರುವ ಜಿಎಸ್‌ಟಿ ತೆಗೆದು ಹಾಕಬೇಕು. ಅಗ್ನಿ ಶಾಮಕ ಸುರಕ್ಷತಾ ಪ್ರಮಾಣ ಪತ್ರ ಪಡೆಯುವ ಕಠಿಣ ನಿಯಮಗಳ ಸಡಿಲಿಕೆ ಮಾಡಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೆ ಸೇರ್ಪಡೆ ಮಾಡಬೇಕು. ಖಾಸಗಿ ಶಾಲಾ ಕಾಲೇಜುಗಳ ಸಿಬ್ಬಂದಿಗೆ ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘ಆರ್‌ಟಿಐ ಕಂತಿನ ಬಾಕಿ ಹಣ ಪಾವತಿಸಬೇಕು. ಕಾಲೇಜುಗಳಿಗೆ ಜಿಎಸ್‌ಟಿ ಹಣವನ್ನು ಪಾವತಿಸುವಂತೆ ನೀಡಿರುವ ನೋಟಿಸ್ ವಾಪಸ್‌ ಪಡೆಯಬೇಕು. ವಿವಿಧ ಸಂಘಟನೆಗಳು, ವ್ಯಕ್ತಿಗಳು ಅಪರೋಕ್ಷವಾಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮೇಲೆ ದೌರ್ಜನ್ಯ, ಹಲ್ಲೆ ನಡೆಸುತ್ತಿರುವ ಘಟನೆಗಳನ್ನು ತಡೆಯಲು ಬೋಧಕ, ಬೋಧಕೇತರರಿಗೆ ರಕ್ಷಣೆ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಮಕ್ಕಳಿಗೆ ಪಠ್ಯಪುಸ್ತಕ ಒದಗಿಸಬೇಕು. ಖಾಸಗಿ ಶಾಲಾ ಕಾಲೇಜುಗಳ ಬಸ್‌ಗಳನ್ನು ಬಳಸಿಕೊಳ್ಳುವಾಗ ಕೆಎಸ್‌ಆರ್‌ಟಿಸಿ ವಾಹನಗಳಿಗೆ ಪಾವತಿಸುವ ರೀತಿಯಲ್ಲಿಯೇ ಬಾಡಿಗೆ ಹಾಗೂ ಭತ್ಯೆ ನೀಡಲು ಕ್ರಮವಹಿಸಬೇಕು’ ಎಂದು ಮನವಿ ಮಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಸ್ಕಿ ಮಾತನಾಡಿ, ‘ರಾಜ್ಯ ಸರ್ಕಾರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯ ತಡೆಬೇಕು’ ಎಂದು ಒತ್ತಾಯಿಸಿದರು.

ಮೇಯರ್ ನರಸಮ್ಮ ಮಾಡಗಿರಿ, ಮಾಜಿ ಶಾಸಕ ಪಾಪರೆಡ್ಡಿ, ಪ್ರತಾಪಗೌಡ ಪಾಟೀಲ, ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್‌ ಸುಖಾಣಿ, ರಜಾಕ್‌ ಉಸ್ತಾದ್, ಎಲ್.ಕೇಶವರೆಡ್ಡಿ, ಬಸವರಾಜ ಪಾಟೀಲ ದರೂರು, ಮಲ್ಲಪ್ಪ, ರಾಜಾ ಶ್ರೀನಿವಾಸ, ಥಾಮಸ್ ಬೆಂಜಮಿನ್, ರವಿ ಮನ್ಸಲಾಪುರು, ಇಕ್ಬಾಲ್ ಅಹಮ್ಮದ್, ದೊಡ್ಡ ಬಸವರಾಜ, ಜಂಗ್ಲೆಪ್ಪಗೌಡ ಪಾಲ್ಗೊಂಡಿದ್ದರು.

ಬೃಹತ್‌ ಮೆರವಣಿಗೆಯಿಂದ ಸಂಚಾರಕ್ಕೆ ವ್ಯತ್ಯಯ ಮೆರವಣಿಗೆ ಮಾರ್ಗದಲ್ಲಿ ಪೊಲೀಸ್‌ ಬಂದೋಬಸ್ತ್ ಅವೈಜ್ಞಾನಿಕ ನೀತಿಗಳ ವಿರುದ್ಧ ಆಕ್ರೋಶ

ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಗಳು ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ಕೆಲ ನಿಯಮಗಳಲ್ಲಿ ಸಡಿಲಿಕೆ ನೀಡಬೇಕು

-ನಾಗರಾಜ ಮಸ್ಕಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.