ಲಿಂಗಸುಗೂರು ತಾಲ್ಲೂಕಿನ ನೀರಲಕೇರಾ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಗ್ರಾಮದ 1 ನೇ ವಾರ್ಡಿನ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು.
ರಾಯಚೂರು: ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗಿನ ಜಾವ ಮಳೆ ಅಬ್ಬರಿಸಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲ ಕಡೆ ಹಳ್ಳದ ಸೇತುವೆಗಳ ಮೇಲೆ ನೀರು ಬಂದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಲಿಂಗಸುಗೂರು ತಾಲ್ಲೂಕಿನ ಆನಾಹೊಸೂರು- ಜಾಗಿರನಂದಿಹಾಳ ನಡುವಿನ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದರಿಂದ ಜಾಗಿರನಂದಿಹಾಳ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇಂದಿನಿಂದ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗಿದ್ದರಿಂದ ಜಾಗಿರನಂದಿಹಾಳ ಗ್ರಾಮದ ವಿದ್ಯಾರ್ಥಿಗಳು 20 ಕಿ.ಮೀ ಸುತ್ತುವರಿದು ಲಿಂಗಸುಗೂರು ಪಟ್ಟಣಕ್ಕೆ ತೆರಳಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಲಿಂಗಸುಗೂರು ಪಟ್ಟಣದ ಐದನೇ ವಾರ್ಡಿನ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯ ಗೋಡೆ ಕುಸಿದು ಬಿದ್ದು ಬೈಕ್ ಜಖಂಗೊಂಡಿದೆ. ಪಟ್ಟಣದ ತಾ.ಪಂ ಇಒ ಮನೆ ಹತ್ತಿರದಲ್ಲಿ ಬೃಹತ್ ಮರ ಬಿದ್ದಿದೆ.
ಹಟ್ಟಿ ಚಿನ್ನದ ಗಣಿ ಸಮೀಪ ಗುಡದನಾಳ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಸಿಂಧನೂರು ತಾಲ್ಲೂಕಿನಲ್ಲೂ ಮಳೆ ಸುರಿದಿದೆ. ಸಿಂಧನೂರು - ಮಸ್ಕಿ ರಾಷ್ಟ್ರೀಯ ಹೆದ್ದಾರಿ (150 ಎ) ಕಲ್ಲೂರು ಬಳಿ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿರುವ ಕಾರಣ ಬಳಗಾನೂರು ಮಾರ್ಗವಾಗಿ ಬಸ್‌ಗಳು ಹಾಗೂ ಸರಕು ಸಾಗಣೆ ವಾಹನಗಳು ಹೋಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.