
ರಾಯಚೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಅಂಗವಾಗಿ ನಗರದಲ್ಲಿ ಶನಿವಾರ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ನಡೆಯಿತು.
ನಗರದ ಗದ್ವಾಲ್ ರಸ್ತೆಯ ವೀರಾಂಜನೇಯ ಮುನ್ನೂರು ಕಾಪು ಕಲ್ಯಾಣ ಮಂಟಪದ ಆವರಣದಿಂದ ಆರಂಭವಾದ ಪಥ ಸಂಚಲನ ಬಸವನಬಾವಿ ವೃತ್ತ, ಪಟೇಲ್ ವೃತ್ತ, ಸೂಪರ್ ಮಾರ್ಕೆಟ್, ಬಟ್ಟೆ ಬಜಾರ್, ಚಂದ್ರಮೌಳಿ ವೃತ್ತ, ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ವಾಲ್ಕಟ್ ಮೈದಾನಕ್ಕೆ ಬಂದು ಸಭೆಯಾಗಿ ಮಾರ್ಪಟ್ಟಿತು.
ಮೆರವಣಿಗೆ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಮಹಿಳೆಯರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವರ ಮೇಲೆ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಿದರು. ವಾಲ್ಕಟ್ ಮೈದಾನದಲ್ಲಿ ಸ್ವಯಂ ಸೇವಕರು ಅಖಂಡ ಭಾರತ ಮಾತೆಯ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ವಿಭಾಗ ಪ್ರಮುಖ ಕಲಬುರಗಿಯ ಕೃಷ್ಣಾ ಜೋಷಿ ಮಾತನಾಡಿ, ‘ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇಂದು ರಾಷ್ಟ್ರ ಮಟ್ಟದಲ್ಲಿ ಬೆಳೆದಿದೆ. ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿದೆ’ ಎಂದು ಹೇಳಿದರು.
‘ಲವ್ ಜಿಹಾದ್ ಹಾಗೂ ಭೂಜಿಹಾದ್ ವಿರುದ್ದ ಹೋರಾಟಕ್ಕೆ ಕಟಿಬದ್ಧವಾಗಿದೆ. ಜಿಹಾದಿ ಮನಸ್ಸಿನ ವಿರುದ್ಧ ಹೋರಾಟ ಮುಂದುವರಿಯಲಿದೆ. ಕಾಶ್ಮೀರಕ್ಕೆ ಸಂವಿಧಾನದ 371 ಪರಿಚ್ಚೇದ ರದ್ದುಗೊಳಿಸುವಂತೆ ಮಾಡುವುದು ನಮ್ಮ ಧ್ಯೇಯವಾಗಿತ್ತು’ ಎಂದು ತಿಳಿಸಿದರು.
‘ಆರ್‌ಎಸ್‌ಎಸ್ ರಾಷ್ಟ್ರ ಭಕ್ತ ಸಂಘಟನೆಯಾಗಿದೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ಮಾಡಿದೆ’ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆರ್‌ಎಸ್‌ಎಸ್‌ನ ಜಿಲ್ಲಾ ಕಾರ್ಯವಾಹಕ ಸದಾನಂದ ಪ್ರಭಾ ಹಾಗೂ ಡಾ.ರಾಮಕೃಷ್ಣ ಎಂ.ಆರ್. ವೇದಿಕೆ ಮೇಲಿದ್ದರು. ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಥ ಸಂಚಲನ ಮಾರ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.