ADVERTISEMENT

ರಾಯಚೂರು: ತ್ಯಾಜ್ಯಮುಕ್ತವಾಗದಿದ್ದರೆ ಅಧಿಕಾರಿಗಳಿಗೆ ದಂಡ

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸಮಿತಿ ಅಧ್ಯಕ್ಷ ಸುಭಾಷ್‌ ಅಡಿ ತಾಕೀತು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 13:41 IST
Last Updated 13 ಸೆಪ್ಟೆಂಬರ್ 2019, 13:41 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸಮಿತಿ ಅಧ್ಯಕ್ಷ ಸುಭಾಷ್‌ ಅಡಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಶುಕ್ರವಾರ ನಡೆಯಿತು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸಮಿತಿ ಅಧ್ಯಕ್ಷ ಸುಭಾಷ್‌ ಅಡಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಶುಕ್ರವಾರ ನಡೆಯಿತು   

ರಾಯಚೂರು: ನವೆಂಬರ್‌ ಒಳಗಾಗಿ ತ್ಯಾಜ್ಯ ವಿಲೇವಾರಿ ನೀತಿ ಅಳವಡಿಸಿಕೊಂಡು ಅನುಷ್ಠಾನ ಮಾಡದಿದ್ದರೆ, ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಬಿ. ಆಡಿ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯನ್ನು ತ್ಯಾಜ್ಯ ಮುಕ್ತವನ್ನಾಗಿಸಲು ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯವಾದ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ADVERTISEMENT

ಕೇಂದ್ರ ಸರ್ಕಾರ ರೂಪಿಸಿರುವ ಘನ ತ್ಯಾಜ್ಯ ವಿಲೇವಾರಿ ನಿಯಮ-2016 ರ ಅನುಷ್ಠಾನವು ಎರಡು ವರ್ಷಗಳಲ್ಲಿ ಸಂಪೂರ್ಣ ಅನುಷ್ಠಾನವಾಗಬೇಕಿತ್ತು. ಇದುವರೆಗೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮನೆ ಮನೆಗಳಿಂದ ಬರುವ ಹಸಿ, ಒಣ ಹಾಗೂ ಗೃಹ ಹಾನಿಕಾರಕ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಸಂಗ್ರಹಿಸಿ, ವಿಲೇವಾರಿ ಮಾಡಬೇಕು. ರಾಯಚೂರಿನಲ್ಲಿ ಶೇ 100 ರಷ್ಟು ಮನೆ ಮನೆಗಳಿಂದ ಕಸ ಸಂಗ್ರಹಿಸಿದರೂ, ಅದನ್ನು ಬೇರ್ಪಡಿಸಿ, ವಿಲೇವಾರಿ ಮಾಡುವ ಕ್ರಮ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಹೇಳಿದರು.

ಪ್ರಮುಖವಾಗಿ ಮೂರು ವಿದಧ ಕಸದ ವಿಂಗಡಣೆ ಅತಿಮುಖ್ಯ. ಅಡುಗೆ ಮನೆಯಿಂದ ಬರುವ ಹಸಿ ಕಸ ಸಾವಯವ ರೂಪದ್ದಾಗಿರುತ್ತದೆ. ಒಣ ಕಸ ಪ್ಲಾಸ್ಟಿಕ್, ಲೋಹ, ಪೇಪರ್ ಇತ್ಯಾದಿಗಳಾದರೆ, ಹಾನಿಕಾರಕ ಕಸದಲ್ಲಿ ಮೆಡಿಸನ್, ಸಿರಂಜ್, ಡೈಪರ್, ನ್ಯಾಪ್‌ಕಿನ್ ಇತ್ಯಾದಿಗಳು ಸೇರಿವೆ. ನಿಯಮ 15ರಡಿಯಲ್ಲಿ ಇವುಗಳನ್ನು ವಿಂಗಡಿಸಿ, ನಿರ್ವಹಿಸುವಂತೆ ತಿಳಿಸಲಾಗಿದೆ. ಈ ವಿಷಯದಲ್ಲಿ ತುಸು ಕಷ್ಟ ಎದುರಾಗಿದೆ. ಹಸಿ ಕಸವನ್ನು ಒಂದು ದಿನಕ್ಕಿಂತ ಹೆಚ್ಚು ಸಂಗ್ರಹಿಸುವಂತಿಲ್ಲ. ದಿನದೊಳಗೆ ಅದನ್ನು ವಿಲೇವಾರಿ ಮಾಡಬೇಕು. ಆದಕಾರಣ ಅದನ್ನು ಪ್ರತಿದಿನ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಆದರೆ ಒಣ ಕಸವನ್ನು ಎರಡರಿಂದ ಮೂರು ದಿನಗಳಿಗೊಮ್ಮೆ ಸಂಗ್ರಹಿಸಿ ನಿರ್ವಹಣೆ ಮಾಡಬಹುದಾಗಿದೆ. ಈ ದಿಸೆಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಇಲಾಖೆಗಳು ಮೊದಲು ಬೈಲಾವನ್ನು ಅಳವಡಿಸಿಕೊಳ್ಳಬೇಕು. ಇದಕ್ಕೆ ಸಂವಿಧಾನದಲ್ಲೆ ಅವಕಾಶ ಕಲ್ಪಿಸಲಾಗಿದೆ. ಕಸ ವಿಂಗಡಣೆ ಮಾಡಿ ನೀಡದಿದ್ದಲ್ಲಿ ದಂಡ ಹಾಕಲು ಸ್ಥಳೀಯ ನಗರ ಸಂಸ್ಥೆಗಳಿಗೆ ಹಾಗೂ ಪಂಚಾಯಿತಿ ವ್ಯಾಪ್ತಿಗಳಿಗೆ ಅವಕಾಶವಿದೆ. ದಂಡ ಸಂಗ್ರಹದ ಬಗ್ಗೆ ಅವುಗಳೇ ನಿರ್ಣಯಿಸಬಹುದಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ತ್ಯಾಜ್ಯವನ್ನು ಬೇರ್ಪಡಿಸದೆ ವಿಲೇವಾರಿಗೆ ನೀಡಿದರೆ ಅವರಿಗೆ ದಂಡ ವಿಧಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಇದು ಮನೆ ಮನೆಗಳಿಂದಲೇ ಅಗಬೇಕು. ಈ ದಿಸೆಯಲ್ಲಿ ಎಲ್ಲಾ ಸ್ಥಳಿಯ ಸಂಸ್ಥೆಗಳು ಎಚ್ಚರವಹಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ನಿರ್ವಹಣೆಗೆ ಉತ್ತಮ ಯೋಜನೆಯನ್ನು ರೂಪಿಸಿಕೊಳ್ಳಬಹುದಾಗಿದೆ. ತ್ಯಾಜ್ಯದಿಂದ ಗೊಬ್ಬರ ಮಾಡಿದಲ್ಲಿ ಆದಾಯ ಕೂಡ ಲಭಿಸುತ್ತದೆ. ನಿಯಮಾವಳಿ ಪ್ರಕಾರ ಹಸಿ ಕಸವನ್ನು ಗೊಬ್ಬರವನ್ನಾಗಿಸಲು ನಗರ, ಸ್ಥಳೀಯ ಸಂಸ್ಥೆಗಳು ಮೊದಲು ಸ್ಥಳವನ್ನು ಗುರುತಿಸಿಕೊಳ್ಳಬೇಕು. ನಂತರದಲ್ಲಿ ಒಣ ಕಸ ಸಂಗ್ರಹಣೆಗೆ ಸಮಯವನ್ನು ನಿಗದಿ ಮಾಡಿಕೊಳ್ಳಬಹುದು. ಆಸ್ಪತ್ರೆಯಿಂದ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಇಲ್ಲಿನ ಸಂಸ್ಥೆಗಳು ನಿರ್ವಹಣೆ ಮಾಡಿ ಶೇ 100ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಮಾತನಾಡಿ. ಜಿಲ್ಲೆಯ ಎಲ್ಲಾ ವಾರ್ಡುಗಳಲ್ಲಿ ಈ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು. ಅಲ್ಲದೇ ವಾರ್ಡ್‌ ಹಿತರಕ್ಷಣಾ ಸಂಸ್ಥೆಗಳ ಸಹಯೋಗ ಪಡೆದುಕೊಂಡು ತ್ಯಾಜ್ಯದ ವಿಂಗಡಣೆ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಪ್ರೋಬೆಷನರಿ ಐಎಎಸ್ ಯುಕೇಶ್ ಕುಮಾರ್ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸೋಮೇಶ್ವರ್ ಇದ್ದರು.

ಜಿಲ್ಲಾ ನಗರಾಭೀವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.