ADVERTISEMENT

ರಾಯಚೂರು | ಗಾನ-ಯಾನ: ಉತ್ಸವ ಸಂಪನ್ನ

ಚಂದ್ರಕಾಂತ ಮಸಾನಿ
Published 8 ಫೆಬ್ರುವರಿ 2026, 7:23 IST
Last Updated 8 ಫೆಬ್ರುವರಿ 2026, 7:23 IST
   

ರಾಯಚೂರು: ನಗರದಲ್ಲಿ ನಿರಂತರವಾಗಿ ಎರಡು ವಾರಗಳಿಂದ ನಡೆದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಶನಿವಾರ ಸಂಜೆ ವರ್ಣರಂಜಿತ ತೆರೆ ಕಂಡಿತು. ಕ್ರೀಡೆ, ಪ್ರದರ್ಶನ, ಕಲೆ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತದ ಗುಂಗಿನಲ್ಲಿ ಜಿಲ್ಲೆಯ ಜನ ಮಧ್ಯರಾತ್ರಿ ಮನೆಗಳತ್ತ ಮೆಲ್ಲನೆಯ ಹೆಜ್ಜೆ ಹಾಕಿದರು.

ಸ್ವಚ್ಛ ಹಾಗೂ ಸುಂದರ ನಗರದ ಸಂಕಲ್ಪದೊಂದಿಗೆ ಮ್ಯಾರಥಾನ್ ಮೂಲಕ ಆರಂಭವಾಗಿದ್ದ ಉತ್ಸವದ ಕಾರ್ಯಕ್ರಮಗಳು ಭರಪೂರ ಖುಷಿ ನೀಡಿದವು. ಸೈಕ್ಕೊಥಾನ್, ಕೃತಕ ಅರಣ್ಯ ಪ್ರದರ್ಶನ, ಅಮ್ಯೂಸ್‌ಮೆಂಟ್ ಪಾರ್ಕ್, ಮಕ್ಕಳ ಹಬ್ಬ, ರೊಬೊಟ್ ಪ್ರದರ್ಶನ, ಕೀಟಗಳ ವಿರಾಟರೂಪ ಪ್ರದರ್ಶನ, ಗಾಳಿಪಟ ಉತ್ಸವ, ತಾರಾಲೋಕ ವೀಕ್ಷಣೆ, ಫಲಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ, ಆಹಾರ ಮೇಳ, ಉದ್ಯೋಗ ಮೇಳ, ಮತ್ಸ ಮೇಳ, ಕೃಷಿ ಮೇಳ, ಪುಸ್ತಕ ಮೇಳ, ಕವಿಗೋಷ್ಟಿ ಮಹಿಳಾ ಗೋಷ್ಠಿ ಯುವ ಸಮಾವೇಶ, ಗ್ಯಾರಂಟಿ ಸಮಾವೇಶ, ಕಲಾ ತಂಡಗಳ ಮೆರವಣಿಗೆ ಹಾಗೂ ಖ್ಯಾತ ಗಾಯಕರ ಸಂಗೀತ ಕಾರ್ಯಕ್ರಮ ಜಿಲ್ಲೆಯ ಜನರನ್ನು ಸಾಂಸ್ಕೃತಿಕ ಲೋಕದಲ್ಲಿ ತೇಲಾಡುವಂತೆ ಮಾಡಿತು.

ಇಷ್ಟು ಸಾಲದು ಎನ್ನುವಂತೆ, ಜನ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ಆಕಾಶದಿಂದ ಎಡೆದೊರೆ ನಾಡಿನ ವೀಕ್ಷಣೆ ಮಾಡಿ ಸಂಭ್ರಮಿಸಿದರು. ರಾಯಚೂರು ಉತ್ಸವ ಮಕ್ಕಳು, ಮಹಿಳೆಯರು, ಯುವಕ-ಯುವತಿಯರು ಹಾಗೂ ವೃದ್ಧರಲ್ಲೂ ಉತ್ಸಾಹದ ಅಲೆ ಹರಿಸಿತು.

ADVERTISEMENT

ಉತ್ಸವದ ಹೆಸರಿನಲ್ಲಿ ಸಣ್ಣಪುಟ್ಟ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಮಧ್ಯ ರಾತ್ರಿವರೆಗೂ ವಹಿವಾಟು ನಡೆಸಿ ಉತ್ತಮ ಆದಾಯ ಪಡೆದುಕೊಂಡರು. ಉದ್ಯಮಿಗಳು ಸಹ ಕೃಷಿ ಮೇಳದಲ್ಲಿ ಅನೇಕ ಕೃಷಿ ಉಪಕರಣ ಹಾಗೂ ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿದರು.

ಕಣ್ಮನ ತಣಿಸಿದ ರಾಜೇಶ್ ಗಾನ

ಗಾಯಕ ರಾಜೇಶ್ ಕೃಷ್ಣನ್ ಅವರ ಮಧುರಗಾನ ಶೋತೃಗಳ ಕಣ್ಮನ ತಣಿಸಿತು.

ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ.... ನೂರೂ ಜನ್ಮಕೂ ನೂರಾರೂ ಜನ್ಮಕೂ.., ಪೆಹಲಾ ಪೆಹಲಾ ಪ್ಯಾರ್ ಹೈ..., ಗೀತಾಂಜಲಿ... ಕಾಲು ಹೆಜ್ಜೆಗೆ..... ಕೇಳದೆ ನಿಮಗೀಗ., ಕವಿತೆ.. ಕವಿತೆ..., ಟೆಲಿಫೋನ್ ಗೆಳತಿ.... ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ಸ್ವಾತಿ ಮುತ್ತಿನ ಮಳೆ ಹನಿಯೇ, ಕುಚಕು...ಕುಚುಕು, ಸುಂಟರ ಗಾಳಿ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನ ರಂಜಿಸಿದರು.

ಸಹ ಗಾಯಕರಾದ ಪೃಥ್ವಿ ಭಟ್ ಹಾಗೂ ಪುಷ್ಪಾ ಸಾಥ್ ನೀಡಿದರು. ಚಲನಚಿತ್ರದಲ್ಲಿರುವಂತ ವಸ್ತ್ರ ವಿನ್ಯಾಸದಲ್ಲೇ ಕಲಾವಿದರು ಹಲವು ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.