
ರಾಯಚೂರು: ಹಿರೇಕಾಯಿ, ತೊಂಡೆಕಾಯಿ ಹಾಗೂ ಬೀನ್ಸ್ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿವೆ. ತರಕಾರಿ ರಾಜ ಬದನೆಕಾಯಿ ಹಾಗೂ ಕಿರೀಟ ಧಾರಕ ಬೆಂಡೆಕಾಯಿ ಸ್ವಲ್ಪ ಮಟ್ಟಿಗೆ ಗ್ರಾಹಕರ ಹಿತ ಕಾಪಾಡಿವೆ.
ಬೆಳ್ಳುಳ್ಳಿ, ಚವಳೆಕಾಯಿ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಡೊಣ್ಣಮೆಣಸಿನಕಾಯಿ, ನುಗ್ಗೆಕಾಯಿ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಹಿರೇಕಾಯಿ, ತೊಂಡೆಕಾಯಿ, ತುಪ್ಪದ ಹಿರೇಕಾಯಿ ಬೆಲೆ ಸ್ಥಿರವಾಗಿದೆ. ಎಲೆಕೋಸು ಬೆಲೆ ದುಪ್ಪಟ್ಟಾಗಿದೆ.
ಪ್ರತಿ ಕ್ವಿಂಟಲ್‌ಗೆ ಹೂಕೋಸು, ಗಜ್ಜರಿ, ಸೌತೆಕಾಯಿ, ಬೀನ್ಸ್ , ₹ 2 ಸಾವಿರ ಹಾಗೂ ಬೀಟ್‌ರೂಟ್ ₹ 1 ಸಾವಿರ ಹೆಚ್ಚಾಗಿದೆ. ಗ್ರಾಹಕರ ಅಚ್ಚುಮೆಚ್ಚಿನ ಹಿರೇಕಾಯಿ, ಬೆಂಡೆಕಾಯಿ ಹಾಗೂ ತೊಂಡೆಕಾಯಿ ಪ್ರತಿ ಕೆ.ಜಿಗೆ ₹ 80ರಂತೆ ಮಾರಾಟವಾಗುತ್ತಿದೆ.
ಸೊಪ್ಪಿಗೆ ಬೇಡಿಕೆ ಇದ್ದರೂ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಸಹಜವಾಗಿಯೇ ಮೆಂತೆ ಹಾಗೂ ಸಬ್ಬಸಗಿ ಬೆಲೆ ಹೆಚ್ಚಾಗಿದೆ. ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು ಬಂದಿದೆ. ತೆಲಂಗಾಣ ಗಡಿ ಗ್ರಾಮ ಹಾಗೂ ರಾಯಚೂರು ಗ್ರಾಮೀಣ ಪ್ರದೇಶದಿಂದ ಹಿರೇಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
‘ಅಕಾಲಿಕ ಮಳೆ ತರಕಾರಿ ಬೆಳೆಗಾರರನ್ನು ನಿದ್ದೇಗಿಡು ಮಾಡಿದೆ. ಕೆಲ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಆಂಧ್ರ ಪ್ರದೇಶದ ಹಾಗೂ ತೆಲಂಗಾಣದ ಗಡಿಗ್ರಾಮಗಳಿಂದ ತರಕಾರಿ ರಾಯಚೂರು ಮಾರುಕಟ್ಟೆಗೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.